×
Ad

ಮಂಗಳೂರಿನಿಂದ ಕಾರ್ಯಾಚರಿಸಲಿದೆ ರಕ್ಷಣಾ ಹಡಗು ‘ಶೂರ್’!

Update: 2016-04-26 19:33 IST

ಮಂಗಳೂರು,ಎ.26: ನವಮಂಗಳೂರು ಬಂದರಿಗೆ ಇಂದು ಬೆಳಗ್ಗೆ ಆಗಮಿಸಿದ ಭಾರತೀಯ ಕರಾವಳಿ ರಕ್ಷಣಾ ಪಡೆಯ ಆಕರ್ಷಕ ಹಾಗೂ ಬೃಹತ್ ಹಡಗು ‘ಶೂರ್’ಗೆ ಅದ್ದೂರಿಯ ಸ್ವಾಗತ ನೀಡಲಾಗಿದ್ದು, ರಾಜ್ಯದ ಅತೀ ದೊಡ್ಡ ರಕ್ಷಣಾ ಹಡಗಾಗಿರುವ ಇದು ಪಣಂಬೂರಿನ ಕರಾವಳಿ ರಕ್ಷಣಾ ಪಡೆಯ ಜಿಲ್ಲಾ ಪ್ರಧಾನ ಕಚೇರಿಯನ್ನು ನೆಲೆಯಾಗಿಸಿಕೊಂಡು ಕಾರ್ಯಾಚರಿಸಲಿದೆ.

ಕೇಂದ್ರ ನೌಕಾಯಾನ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಎಪ್ರಿಲ್ 11ರಂದು ಗೋವಾದಲ್ಲಿ ಈ ಹಡಗಿಗೆ ಚಾಲನೆ ನೀಡಿದ್ದರು. ಇದು ಜಗತ್ತಿನಲ್ಲೇ ಕರಾವಳಿ ರಕ್ಷಣೆಯ ನಾಲ್ಕನೇ ಬೃಹತ್ ಹಡಗು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಹಡಗಿನ ಸ್ವಾಗತ ಸಮಾರಂಭದಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆಯ ಕರ್ನಾಟಕ ವಿಭಾಗದ ಮಹಾನಿರೀಕ್ಷಕ ಕೆ. ಆರ್. ಸುರೇಶ್ ಅವರು ಎನ್‌ಎಂಪಿಟಿಯಲ್ಲಿ ಹಡಗಿನ ಸಿಬ್ಬಂದಿಗೆ ಸ್ವಾಗತ ಕೋರಿದರು.

ಎನ್‌ಎಂಪಿಟಿ ಅಧ್ಯಕ್ಷ ಪಿ.ಸಿ. ಪರಿದಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಶೂರ್ ಹಡಗು ಆಗಮನದೊಂದಿಗೆ ಸಾಗರ ಸುರಕ್ಷತೆಯನ್ನು ಮತ್ತಷ್ಟು ಬಿಗಿಗೊಳಿಸಿದಂತಾಗಿದೆ ಎಂದರು.

ಕೇವಲ ಸುರಕ್ಷತೆ ಕಲ್ಪಿಸುವುದು ಮಾತ್ರವಲ್ಲ ಅನೇಕ ವಿಪತ್ತಿನ ಸಂದರ್ಭಗಳಲ್ಲಿ ಕರಾವಳಿ ರಕ್ಷಣಾ ಪಡೆಯ ನೆರವು ಮಹತ್ವದ್ದು. ಮುಂದೆ ಕೇಂದ್ರ ಸರ್ಕಾರ ಸಾಗರಮಾಲಾ ಯೋಜನೆಯಡಿ ಬಂದರುಗಳ ಸಂಖ್ಯೆ ಹೆಚ್ಚಿಸುವ ಯೋಜನೆ ಇರುವ ಕಾರಣ ಸದೃಢ ಕರಾವಳಿ ರಕ್ಷಣಾ ಪಡೆಯ ಅಗತ್ಯವಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಮಾತನಾಡಿದ ಭಾರತೀಯ ಕರಾವಳಿ ರಕ್ಷಣಾ ಪಡೆಯು ಪಶ್ಚಿಮ ಕರಾವಳಿಯ ರಕ್ಷಣೆಯ ಜತೆಗೆ, ಸಾಗರ ರಕ್ಷಣೆ ಮಾತ್ರವಲ್ಲದೇ ಮೀನುಗಾರರ ಪ್ರಾಣ ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೋಸ್ಟ್‌ಗಾರ್ಡ್ ಕರ್ನಾಟಕ ಕಮಾಂಡರ್ ಕೆ.ಆರ್.ಸುರೇಶ್, ಮುಂಬೈನ 26/11 ಉಗ್ರರ ದಾಳಿಯ ಬಳಿಕ ಕರಾವಳಿಯ ಸುರಕ್ಷತೆ ಭದ್ರಪಡಿಸಲು ಆದ್ಯತೆ ನೀಡಲಾಗಿದೆ. ಸದ್ಯ ಅಮೆರಿಕಾ, ಜಪಾನ್ ಹಾಗೂ ಕೊರಿಯಾ ಬಿಟ್ಟರೆ ವಿಶ್ವದ ನಾಲ್ಕನೇ ಅತಿದೊಡ್ಡ ಕೋಸ್ಟ್‌ಗಾರ್ಡ್ ಭಾರತದ್ದಾಗಿದೆ.

ಪಣಂಬೂರಿನಲ್ಲಿ ಈಗಾಗಲೇ ನಾಲ್ಕು ಫಾಸ್ಟ್ ಪ್ಯಾಟ್ರೊಲ್ ನೌಕೆಗಳು, ಎರಡು ಹೋವರ್‌ಕ್ರಾಫ್ಟ್‌ಗಳಿದ್ದು, ಶೂರ್ ಮತ್ತೊಂದು ಸೇರ್ಪಡೆ. ಎನ್‌ಎಂಪಿಟಿ ಕೋಸ್ಟ್‌ಗಾರ್ಡ್‌ಗೆ ಪ್ರತ್ಯೇಕ ಜೆಟ್ಟಿ ಕೊಡುವ ಭರವಸೆಯನ್ನೂ ನೀಡಿದ್ದು, ಇದರಿಂದ ಇಲ್ಲಿ ಕಾರ್ಯಾಚರಣೆ ಮತ್ತಷ್ಟು ಬಲಗೊಳ್ಳಲಿದೆ ಎಂದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ. ಜಿ. ಉಮಾ , ಕಸ್ಟಮ್ಸ್ ಕಮಿಷನರ್ ಡಾ. ಎಂ. ಸುಬ್ರಮಣಿಯಮ್ ಈ ಸಂದರ್ಭ ಉಪಸ್ಥಿತರಿದ್ದರು.

ಶೂರ್‌ನ ವಿಶೇಷತೆಗಳು

ಶೂರ್ ಗೋವಾ ಶಿಪ್ ಯಾರ್ಡ್‌ನಲ್ಲಿ ದೇಶೀಯವಾಗಿ ನಿರ್ಮಾಣಗೊಂಡಿದ್ದು 2350 ಟನ್ ತೂಕ ಹಾಗೂ 105 ಮೀಟರ್ ಉದ್ದವನ್ನು ಹೊಂದಿದೆ. ಗರಿಷ್ಠ 23 ನಾಟಿಕಲ್ ಮೈಲಿ ವೇಗದಲ್ಲಿ ಸಂಚರಿಸಬಲ್ಲ ಶೂರ್, 14 ಅಧಿಕಾರಿಗಳು, 98 ಸಿಬ್ಬಂದಿಗಳನ್ನು ಹೊಂದಿದೆ. ಹಡಗಿನ ಕಮಾಂಡರ್ ಆಗಿ ಡಿಐಜಿ ಸುರೇಂದ್ರ ಸಿಂಗ್ ದಾಸಿಲಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಶ್ಚಿಮ ಕರಾವಳಿಯಲ್ಲಿ ಸಾಗರ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಶೂರ್ ಪ್ರಧಾನ ಪಾತ್ರ ವಹಿಸಲಿದೆ. ಅತ್ಯಾಧುನಿಕ ಯಾನ ಮತ್ತು ಸಂಪರ್ಕ ಸಾಧನಗಳನ್ನು ಅಳವಡಿಸಿಕೊಂಡಿರುವ ಶೂರ್‌ನಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಸಂವೇದಿ ಉಪಕರಣಗಳಿವೆ. ಸಮಗ್ರ ಯಾಂತ್ರಿಕ ನಿಯಂತ್ರಣ ವ್ಯವಸ್ಥೆ, ಉತ್ಕೃಷ್ಟವಾದ ಅಗ್ನಿ ನಿರೋಧಕ ವ್ಯವಸ್ಥೆಗಳನ್ನೂ ಅಳವಡಿಸಲಾಗಿದೆ. ಐದು ಅತಿವೇಗದ ಬೋಟ್‌ಗಳನ್ನು , ಎರಡು ಎಂಜಿನ್‌ಗಳ ಲಘು ಹೆಲಿಕಾಪ್ಟರ್‌ಗಳನ್ನು ಕೊಂಡೊಯ್ಯು ಸಾಮರ್ಥ್ಯ ಶೂರ್‌ಗಿದೆ. ಇದರಲ್ಲಿ ಹೆಲಿಪಾಡ್ ಕೂಡ ಇದೆ. ಸಮುದ್ರದಲ್ಲಿ ತೈಲ ಚೆಲ್ಲಿ ಉಂಟಾಗುವ ಮಾಲಿನ್ಯ ನಿರ್ವಹಣೆಯಲ್ಲೂ ಈ ಹಡಗು ಕಾರ್ಯ ನಿರ್ವಹಿಸಬಲ್ಲದು. ವೇಗವಾಗಿ ಹಡಗನ್ನೇರುವ ವ್ಯವಸ್ಥೆ, ಸಾಗರ ಸುರಕ್ಷತೆಯಲ್ಲಿ ಹುಡುಕುವ ಮತ್ತು ರಕ್ಷಣಾ ಕಾರ್ಯಗಳಿಗೆ ಅನುಕೂಲ ಸೌಲಭ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News