ನನ್ನ ಅರ್ಧ ಸಂಪುಟದಲ್ಲಿ ಮಹಿಳೆಯರು: ಹಿಲರಿ
ವಾಶಿಂಗ್ಟನ್, ಎ. 26: ಅಮೆರಿಕದ ಪ್ರಥಮ ಮಹಿಳಾ ಅಧ್ಯಕ್ಷರಾಗುವ ನಿಟ್ಟಿನಲ್ಲಿ ಅಭಿಯಾನ ನಡೆಸುತ್ತಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಹಿಲರಿ ಕ್ಲಿಂಟನ್, ತಾನು ಶ್ವೇತಭವನಕ್ಕೆ ಆಯ್ಕೆಯಾದರೆ ತನ್ನ ಅರ್ಧ ಸಂಪುಟ ಮಹಿಳೆಯರಿಂದಲೇ ತುಂಬಿರುವುದು ಎಂದು ಹೇಳಿದ್ದಾರೆ.
‘‘ಅಮೆರಿಕದಂತೆಯೇ ಕಾಣುವ ಸಂಪುಟವನ್ನು ನಾನು ಹೊಂದುತ್ತೇನೆ. ಅಮೆರಿಕದಲ್ಲಿ 50 ಶೇಕಡ ಮಹಿಳೆಯರು ಇದ್ದಾರಲ್ಲವೇ?’’ ಎಂದರು.
ಮೇರಿಲ್ಯಾಂಡ್, ಡೆಲವೇರ್, ಪೆನ್ಸಿಲ್ವೇನಿಯ, ಕನೆಕ್ಟಿಕಟ್ ಮತ್ತು ರೋಡ್ ಐಲ್ಯಾಂಡ್- ಪೂರ್ವದ ಈ ಐದು ರಾಜ್ಯಗಳಲ್ಲಿ ನಡೆಯಲಿರುವ ಮಹತ್ವದ ಪ್ರೈಮರಿಗಳ ಮುನ್ನಾ ದಿನವಾದ ಸೋಮವಾರ ರಾತ್ರಿ ಎಂಎಸ್‌ಎನ್‌ಬಿಸಿ ಟೌನ್‌ಹಾಲ್‌ನಲ್ಲಿ ಅವರು ಮಾತನಾಡುತ್ತಿದ್ದರು.
ಹಿಲರಿ ಕ್ಲಿಂಟನ್‌ರ ಸಂಪುಟದಲ್ಲಿ ಭಾರತೀಯ ಅಮೆರಿಕನ್ ನೀರಾ ಟಂಡನ್‌ರನ್ನು ನೋಡಲು ತಾನು ಇಚ್ಛಿಸುತ್ತೇನೆ ಎಂಬುದಾಗಿ ಹಿಲರಿಯ ಪ್ರಚಾರ ನಿರ್ವಾಹಕ ಜಾನ್ ಪೊಡೆಸ್ಟ ಹೇಳಿದ ಒಂದು ದಿನದ ಬಳಿಕ ಹಿಲರಿ ಈ ಮಾತುಗಳನ್ನು ಹೇಳಿದ್ದಾರೆ.
ನೀರಾ ಟಂಡನ್ ಹಿಲರಿಗಾಗಿ 14 ವರ್ಷಗಳಿಗೂ ಅಧಿಕ ಕಾಲ ಕೆಲಸ ಮಾಡಿದ್ದರು. ಈಗ ಅವರು ಸೆಂಟರ್ ಫಾರ್ ಅಮೆರಿಕನ್ ಪ್ರೊಗ್ರೆಸ್ (ಸಿಎಪಿ)ನ ಮುಖ್ಯಸ್ಥರಾಗಿದ್ದಾರೆ. ನೀರಾ ನಾಯಕತ್ವದಲ್ಲಿ ಈ ಸಂಸ್ಥೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿದೆ.
‘‘ಮಹಿಳೆಯರ ಹಕ್ಕುಗಳು ಮಾನವಹಕ್ಕುಗಳು ಎಂಬುದರ ಪರವಾಗಿ ನಾನು ನನ್ನ ಸಾರ್ವಜನಿಕ ಜೀವನದ ಹೆಚ್ಚಿನ ಭಾಗವನ್ನು ವ್ಯಯಿಸಿದ್ದೇನೆ. ಮಹಿಳೆಯರನ್ನು ಈಗಲೂ ತಡೆಯುತ್ತಿರುವ ನಿರ್ಬಂಧಗಳನ್ನು ಕಾನೂನು, ನಿಯಮಾವಳಿಗಳು, ಸಂಸ್ಕೃತಿ ಮುಂತಾದುವುಗಳ ಮೂಲಕ ಹೋಗಲಾಡಿಸಲು ಸಾಧ್ಯವಿರುವ ಎಲ್ಲವನ್ನೂ ನಾವು ಮಾಡುತ್ತಿದ್ದೇವೆ’’ ಎಂದು ಎಂಎಸ್‌ಎನ್‌ಬಿಸಿ ಟೌನ್‌ಹಾಲ್‌ನಲ್ಲಿ ಹಿಲರಿ ಹೇಳಿದರು.