×
Ad

ಭಾರತೀಯ ವಕೀಲನಿಗೆ ಆ್ಯಮ್ನೆಸ್ಟಿ ಜರ್ಮನಿ ಪ್ರಶಸ್ತಿ

Update: 2016-04-26 21:50 IST

ಬರ್ಲಿನ್, ಎ. 26: ಆ್ಯಮ್ನೆಸ್ಟಿ ಜರ್ಮನಿ ತನ್ನ 8ನೆ ಮಾನವಹಕ್ಕುಗಳ ಪ್ರಶಸ್ತಿಯನ್ನು ಭಾರತೀಯ ವಕೀಲ ಹಾಗೂ ಮಾನವಹಕ್ಕುಗಳ ಕಾರ್ಯಕರ್ತ ಹೆನ್ರಿ ಟಿಫಾನ್‌ಗೆ ನೀಡಿದೆ.

ಬರ್ಲಿನ್‌ನ ಮ್ಯಾಕ್ಸಿಮ್ ಗಾರ್ಕಿ ತಿಯೇಟರ್‌ನಲ್ಲಿ ಸೋಮವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಭಾರತದಲ್ಲಿ ದಶಕಗಳಿಂದ ಮಾನವಹಕ್ಕುಗಳಿಗಾಗಿ ಹೋರಾಡುತ್ತಿರುವ 59 ವರ್ಷದ ಸಾಧಕನಿಗೆ ಮಾನವಹಕ್ಕುಗಳ ಸಂಘಟನೆ ಗೌರವ ಸಲ್ಲಿಸಿತು.

 ‘‘ಭಾರತದಲ್ಲಿ ಹಿಂಸೆ ಮತ್ತು ತಾರತಮ್ಯದ ವಿರುದ್ಧ ಹೆನ್ರಿ ಟಿಫಾನ್ ನಡೆಸಿಕೊಂಡು ಬರುತ್ತಿರುವ ಚಳವಳಿ ಅನುಕರಣೀಯವಾಗಿದೆ ಹಾಗೂ ಮಾನವಹಕ್ಕುಗಳಿಗಾಗಿ ಹೋರಾಡುತ್ತಿರುವ ಜಗತ್ತಿನ ಎಲ್ಲ ಕಾರ್ಯಕರ್ತರಿಗೆ ಸ್ಫೂರ್ತಿಯ ಸೆಲೆಯಾಗಿದೆ’’ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಜರ್ಮನಿಯ ನಿರ್ದೇಶಕಿ ಸೆಲ್ಮಿನ್ ಕ್ಯಾಲಿಸ್ಕನ್ ಹೇಳಿದರು.

 ‘‘ತನ್ನ ಸಂಘಟನೆ ‘ಪೀಪಲ್ಸ್ ವಾಚ್’ ಮೂಲಕ ಹೆನ್ರಿ 20 ವರ್ಷಗಳಿಗೂ ಅಧಿಕ ಅವಧಿಯಲ್ಲಿ ಸರಕಾರಿ ಪ್ರಾಯೋಜಿತ ಹಿಂಸೆಯ ಬಲಿಪಶುಗಳಿಗೆ ನೆರವು ನೀಡುತ್ತಿದ್ದಾರೆ. ಸಂತ್ರಸ್ತರು ತಮ್ಮ ಹಕ್ಕುಗಳು ಮತ್ತು ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಸರಕಾರದ ಕೆಂಗಣ್ಣಿಗೂ ಗುರಿಯಾಗಿದ್ದಾರೆ’’

ಹೆನ್ರಿ ಟಿಫಾನ್ 1990ರ ದಶಕದ ಮಧ್ಯ ಭಾಗದಲ್ಲಿ ಪೀಪಲ್ಸ್ ವಾಚ್ ಸ್ಥಾಪಿಸಿದರು. ಜಾತಿ ಆಧಾರಿತ ತಾರತಮ್ಯ ಮತ್ತು ಮಾನವಹಕ್ಕುಗಳ ಉಲ್ಲಂಘನೆ ಇಲ್ಲದ ಸಮಾಜವನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News