ಐನ್‌ಸ್ಟೀನ್‌ರ ಸಾಪೇಕ್ಷ ಸಿದ್ಧಾಂತಕ್ಕೆ ಬಾಹ್ಯಾಕಾಶದಲ್ಲಿ ಪರೀಕ್ಷೆ
Update: 2016-04-26 23:13 IST
ಸಯೆನ್ (ಫ್ರಾನ್ಸ್), ಎ. 26: ಹೊಸದಾಗಿ ಉಡಾಯಿಸಲಾಗಿರುವ ಉಪಗ್ರಹವೊಂದು ಐನ್‌ಸ್ಟೀನ್‌ರ ಸಾಮಾನ್ಯ ಸಾಪೇಕ್ಷ ಸಿದ್ಧಾಂತವನ್ನು ಬಾಹ್ಯಾಕಾಶದಲ್ಲಿ ಪರೀಕ್ಷೆಗೊಡ್ಡಲಿದೆ. ಈ ಪ್ರಯೋಗವು ಭೌತಶಾಸ್ತ್ರದ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಫ್ರಾನ್ಸ್‌ನ ಉಪಗ್ರಹ 'ಮೈಕ್ರೋಸ್ಕೋಪ್' ಈ ಪ್ರಯೋಗವನ್ನು ನಡೆಸಲಿದ್ದು, ಇದು ಗುರುತ್ವಾಕರ್ಷಣೆ ಕುರಿತ ನಮ್ಮ ಆಧುನಿಕ ತಿಳುವಳಿಕೆಯನ್ನು ಹೆಚ್ಚಿಸಲಿದೆ.
ಎರಡು ಭಿನ್ನ ಲೋಹದ ತುಂಡುಗಳು- ಒಂದು ಟೈಟಾನಿಯಂ ಮತ್ತು ಇನ್ನೊಂದು ಪ್ಲಾಟಿನಂ ರೇಡಿಯಂ ಮಿಶ್ರಲೋಹ- ಬಾಹ್ಯಾಕಾಶದ ಕಕ್ಷೆಯಲ್ಲಿ ಹೇಗೆ ವರ್ತಿಸಲಿವೆ ಎಂಬುದನ್ನು ಪ್ರಯೋಗದಲ್ಲಿ ಪತ್ತೆಹಚ್ಚಲಿದ್ದಾರೆ.
ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹದಲ್ಲಿ, ಭೂಮಿಯಲ್ಲಿ ಎದುರಾಗುವ ಅಡೆತಡೆಗಳಿಂದ ಮುಕ್ತವಾದ ಪರಿಸರದಲ್ಲಿ ಎರಡು ಲೋಹಗಳ ಸಾಪೇಕ್ಷ ಚಲನೆಯನ್ನು ಅಧ್ಯಯನ ಮಾಡಲು ಸಾಧ್ಯ ಎಂದು ಏರಿಯನ್‌ಸ್ಪೇಸ್ ಹೇಳಿದೆ. ಅದು ಸೋಮವಾರ ಉಪಗ್ರಹವನ್ನು ಕಕ್ಷೆಯಲ್ಲಿ ಕೂರಿಸಿದೆ.