60 ಲಕ್ಷ ಡಾಲರ್ ಪರಿಹಾರ ನೀಡಲು ಒಡಂಬಡಿಕೆ
ಕ್ಲೀವ್‌ಲ್ಯಾಂಡ್ (ಅಮೆರಿಕ), ಎ. 26: ಮನೋರಂಜನಾ ಕೇಂದ್ರವೊಂದರ ಹೊರಗಡೆ ಆಟಿಕೆ ಬಂದೂಕಿನಲ್ಲಿ ಆಡುತ್ತಿದ್ದ 12ರ ಹರೆಯದ ಕರಿಯ ಬಾಲಕ ಟಮಿರ್ ರೈಸ್‌ನನ್ನು ಬಿಳಿಯ ಪೊಲೀಸ್ ಅಧಿಕಾರಿಯೋರ್ವ ಹತ್ಯೆ ಮಾಡಿದ ಪ್ರಕರಣದಲ್ಲಿ ಬಾಲಕನ ಕುಟುಂಬಕ್ಕೆ 60 ಲಕ್ಷ ಡಾಲರ್ ಪರಿಹಾರ ನೀಡುವ ಒಡಂಬಡಿಕೆಗೆ ಕ್ಲೀವ್‌ಲ್ಯಾಂಡ್ ನಗರ ಸೋಮವಾರ ಒಪ್ಪಿದೆ.
ನಗರವು ಈ ವರ್ಷ 30 ಲಕ್ಷ ಡಾಲರ್ ಮತ್ತು ಮುಂದಿನ ವರ್ಷ 30 ಲಕ್ಷ ಡಾಲರ್ ಬಾಲಕನ ಕುಟುಂಬಕ್ಕೆ ನೀಡಲಿದೆ ಎಂದು ಕ್ಲೀವ್‌ಲ್ಯಾಂಡ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾದ ಪ್ರಸ್ತಾಪವು ತಿಳಿಸಿದೆ.
ತಪ್ಪು ಸಂಭವಿಸಿರುವ ಬಗ್ಗೆ ಒಡಂಬಡಿಕೆ ಪತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ.
ಇದು ಐತಿಹಾಸಿಕ ಒಡಂಬಡಿಕೆ ಎಂದು ಕುಟುಂಬದ ವಕೀಲ ಸುಬೋಧ್ ಚಂದ್ರ ಬಣ್ಣಿಸಿದರು. ''ಆದರೆ, ಸಂಭ್ರಮ ಪಡುವ ವಿಷಯವಲ್ಲ. ಯಾಕೆಂದರೆ 12 ವರ್ಷದ ಬಾಲಕ ಅನಗತ್ಯವಾಗಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ'' ಎಂದು ಅವರು ಹೇಳಿದರು.
ಬಾಲಕನ ಕುಟುಂಬ ನಗರ ಮತ್ತು ಪೊಲೀಸರ ವಿರುದ್ಧ ಮೊಕದ್ದಮೆ ದಾಖಲಿಸಿತ್ತು. 2014 ನವೆಂಬರ್ 22ರಂದು ಪೊಲೀಸರು ಬಾಲಕನನ್ನು ನಿಭಾಯಿಸುವಾಗ ಬೇಜವಾಬ್ದಾರಿಯಿಂದ ವರ್ತಿಸಿದ್ದರು ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.