ಉತ್ತರ ಪ್ರದೇಶದಲ್ಲಿ ಬೌದ್ಧಗುರುಗಳಿಂದ ಬಿಜೆಪಿ ಚುನಾವಣಾ ಪ್ರಚಾರ!
ಹೊಸದಿಲ್ಲಿ, ಎ.26: ಉತ್ತರ ಪ್ರದೇಶ ಚುನಾವಣೆಯನ್ನು ಶತಾಯ ಗತಾಯ ಗೆಲ್ಲಲೇಬೇಕು ಎಂಬ ಜಿದ್ದಿಗೆ ಬಿದ್ದಿರುವ ಬಿಜೆಪಿ ಬೌದ್ಧಭಿಕ್ಕುಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ದೇಶದ ಅತ್ಯಧಿಕ ಜನಸಂಖ್ಯೆಯ ರಾಜ್ಯದ ಉದ್ದಗಲಕ್ಕೂ ಆರು ತಿಂಗಳ ಕಾಲ ಸಂಚರಿಸುವ ಬೌದ್ಧಧರ್ಮಗುರುಗಳು, ಪ್ರಧಾನಿ ಮೋದಿಯವರು ಬೌದ್ಧಧರ್ಮ ಹಾಗೂ ಅಂಬೇಡ್ಕರ್ ಬಗ್ಗೆ ಹೊಂದಿದ ಅಭಿಪ್ರಾಯಗಳನ್ನು ಜನರಿಗೆ ಮನವರಿಕೆ ಮಾಡಿಸುವ ಪ್ರಯತ್ನಕ್ಕೆ ಮುಂದಾಗಿದೆ,
ಈ ಯೋಜನೆಯ ಮೂಲ ಉದ್ದೇಶ ಧಾರ್ಮಿಕ ಜಾಗೃತಿ ಎಂದು ಬಿಂಬಿಸಲಾಗಿದ್ದರೂ, ಮೋದಿಯೇ ಇದರ ಕೇಂದ್ರಬಿಂದುವಾಗಿರುತ್ತಾರೆ. ಅಂಬೇಡ್ಕರ್ ಅನುಯಾಯಿಗಳಾದ ದಲಿತರ ಮತಗಳನ್ನು ಸೆಳೆಯಲು ಈ ತಂತ್ರ. ಬಿಎಸ್ಪಿಯ ಪ್ರಬಲ ನೆಲೆ ಎನಿಸಿಕೊಂಡಿರುವ ರಾಜ್ಯದಲ್ಲಿ ದಲಿತ ಮತಬುಟ್ಟಿಗೆ ಕೈಹಾಕಲು ಈ ಹರಸಾಹಸಕ್ಕೆ ಬಿಜೆಪಿ ಮುಂದಾಗಿದೆ. ಮಾಯಾವತಿಯವರ ಜತೆ ನಿಕಟ ಸಂಪರ್ಕ ಹೊಂದಿದ್ದ ಕೆಲ ಬಿಎಸ್ಪಿ ಮುಖಂಡರು ಇದೀಗ ಬಿಜೆಪಿ ಸೇರಿದ್ದು, ಈ ತೀವ್ರತರ ಪ್ರಚಾರಕ್ಕೆ ಮಾರ್ಗದರ್ಶಿಗಳಾಗಿ ಪ್ರಚಾರ ವ್ಯವಸ್ಥಾಪಕರು ಹಾಗೂ ಪಕ್ಷದ ಸಂಘಟನೆಯ ಕೊಂಡಿಯಾಗಿ ಕಾರ್ಯನಿರ್ವಹಿಸುವರು ಎಂದು ತಿಳಿದುಬಂದಿದೆ. ಸೀತಾಪುರ ಸಂಸದ ರಾಜೇಶ್ ವರ್ಮಾ ಅಂಥ ಮುಖಂಡರಲ್ಲೊಬ್ಬರು.
ಪ್ರಧಾನಿ ಕಚೇರಿ ಇಡೀ ಪ್ರಚಾರದ ಮೇಲ್ವಿಚಾರಣೆ ನಡೆಸಲಿದ್ದು, ಧಮ್ಮ ಚಕ್ರ ಯಾತ್ರೆ ಎಂದು ಹೆಸರಿಸಲಾಗಿದೆ. ಕಳೆದ ಭಾನುವಾರ ಗೃಹಸಚಿವ ರಾಜನಾಥ್ ಸಿಂಗ್ ಅವರು ಸಾರನಾಥದಲ್ಲಿ ಈ ಯಾತ್ರೆಗೆ ಚಾಲನೆ ನೀಡಿದ್ದರು. ಆರೆಸ್ಸೆಸ್ ಸದಸ್ಯ ಡಾ.ಧಮ್ಮ ವಿರಿಯೊ ಮಹತರೆ ನೇತೃತ್ವದಲ್ಲಿ ಯಾತ್ರೆ ನಡೆಯಲಿದ್ದು, ಅಕ್ಟೋಬರ್ 14ರಂದು ಇದು ಮುಕ್ತಾಯವಾಗಲಿದೆ. ಈ ಯಾತ್ರೆಯಲ್ಲಿ 70 ರಿಂದ 80 ಮಂದಿ ಬೌದ್ಧಭಿಕ್ಷುಗಳಿದ್ದು, ಅಪಾರ ಅನುಯಾಯಿಗಳೂ ಪಾಲ್ಗೊಳ್ಳಲಿದ್ದಾರೆ. ಹವಾನಿಯಂತ್ರಿತ ಬಸ್ ಹಾಗೂ ಇನೋವಾ ಕಾರುಗಳಲ್ಲಿ ಎಲ್ಲ ಬೌದ್ಧ ಕೇಂದ್ರಗಳಿಗೂ ಇವರು ಭೇಟಿ ನೀಡುವರು.
ಮೋದಿಯವರು ಭಾರತ ಹಾಗೂ ವಿಶ್ವದ ಇತರ ಕಡೆಗಳಲ್ಲಿ ಬೌದ್ಧ ಕೇಂದ್ರಗಳಿಗೆ ಭೇಟಿ ನೀಡಿದ ಚಿತ್ರವನ್ನು ವಾಹನದಲ್ಲಿ ಬಿಂಬಿಸಲಾಗಿದೆ. ಬೌದ್ಧಭಿಕ್ಕುಗಳು ಪ್ರತಿ ಕೇಂದ್ರಗಳಲ್ಲಿ ಟಿವಿ ಉಡುಗೊರೆ ನೀಡಲಿದ್ದು, ಇದರ ಮೂಲಕ ಒಂದು ಗಂಟೆಯ ಮೋದಿ ಸಂದೇಶದ ಸಿಡಿಯನ್ನೂ ಪ್ರದರ್ಶಿಸಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ಎರಡು ದಿನಗಳ ಕಾಲ ಈ ತಂಡ ವಾಸ್ತವ್ಯ ಹೂಡಲಿದೆ. ನಾಲ್ಕು ಹಂತಗಳ ಯಾತ್ರೆಯ 70 ಜಿಲ್ಲಾ ಕೇಂದ್ರಗಳಿಗೇ ಭೇಟಿ ನೀಡಲಿದೆ. ಮುಂದಿನ ಮಾರ್ಚ್- ಎಪ್ರಿಲ್‌ನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.