ವೈದ್ಯರ ಬ್ರಾಂಡೆಡ್ ಔಷಧಗಳ ಮೋಹಕ್ಕೆ ಕಡಿವಾಣ
ಹೊಸದಿಲ್ಲಿ, ಎ.26: ರೋಗಿಗಳು ಸರಕಾರದಿಂದ ನಡೆಸಲಾಗುತ್ತಿರುವ ಜನ್ ಔಷಧ ಸ್ಟೋರ್‌ಗಳಲ್ಲಿ ಲಭ್ಯವಿರುವ ಕೈಗೆಟಕುವ ದರದ ಔಷಧಗಳನ್ನೇ ಖರೀದಿಸುವಂತಾಗಲು ವೈದ್ಯರು ರೋಗಿಗಳಿಗೆ ಜನರಿಕ್ ಔಷಧವನ್ನೇ ಬರೆದು ಕೊಡುವುದನ್ನು ಕಡ್ಡಾಯಗೊಳಿಸುವ ಕಾನೂನೊಂದನ್ನು ಜಾರಿಗೆ ತರಲು ಸರಕಾರ ಯೋಚಿಸುತ್ತಿದೆ.
ವೈದ್ಯರು ದೊಡ್ಡ ಕಂಪೆನಿಗಳ ದುಬಾರಿ ದರದ ಬ್ರಾಂಡೆಡ್ ಔಷಧಗಳನ್ನು ರೋಗಿಗಳಿಗೆ ಬರೆದುಕೊಡುವ ಪದ್ಧತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ದೇಶದಾದ್ಯಂತ 2,000 ಜನರಿಗೆ ಔಷಧ ಕೇಂದ್ರಗಳನ್ನು ತೆರೆಯುವ ಸರಕಾರದ ಯೋಜನೆಯ ಪ್ರಗತಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸದ್ಯದಲ್ಲಿಯೇ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು.
''ಇಲ್ಲಿರುವ ದೊಡ್ಡ ಸಮಸ್ಯೆಯೆಂದರೆ ಪ್ರಸ್ತುತ ವೈದ್ಯರು ಜನ್ ಔಷಧ ಸ್ಟೋರ್‌ಗಳಲ್ಲಿ ಲಭ್ಯವಿರುವ ಜನರಿಕ್ ಔಷಧಗಳನ್ನು ರೋಗಿಗಳಿಗೆ ಬರೆಯುತ್ತಿಲ್ಲ. ಆದುದರಿಂದ ವೈದ್ಯರು ಬರೆದು ಕೊಡುವ ಔಷಧಕ್ಕೆ ಪರ್ಯಾಯವಾದ ಜನರಿಕ್ ಔಷಧವನ್ನು ಗುರುತಿಸುವುದು ರೋಗಿಗಳಿಗೆ ಕಷ್ಟವಾಗುತ್ತಿದೆ. ಆದುದರಿಂದ ಕಾನೂನೊಂದನ್ನು ಜಾರಿಗೆ ತಂದು ವೈದ್ಯರು ಜನರಿಕ್ ಔಷಧ ಬರೆದುಕೊಡುವಂತೆ ಮಾಡುವುದು ಅಥವಾ ಅವರು ಬ್ರಾಂಡೆಡ್ ಔಷಧವನ್ನು ಬರೆದು ಕೊಡುವಾಗ 'ಅದಕ್ಕೆ ಸಮನಾದ ಜನರಿಕ್ ಔಷಧ' ಎಂಬ ಉಪಬಂಧ ಸೇರಿಸುವ ಬಗ್ಗೆ ಯೋಚಿಸಲಾಗುತ್ತಿದೆ,''ಎಂದುಬ್ಯೂರೋ ಆಫ್ ಫಾರ್ಮಾ ಪಿಎಸ್‌ಯೂಸ್ ಆಫ್ ಇಂಡಿಯಾದ (ಬಿಪಿಪಿಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ ಡಿ ಶ್ರೀಕುಮರ್ ತಿಳಿಸಿದ್ದಾರೆ. ಬಿಪಿಪಿಐ ಮುಖಾಂತರವೇ ಫಾರ್ಮಾಸ್ಯೂಟಿಕಲ್ಸ್ ಇಲಾಖೆ ಜನರಿಕ್ ಔಷಧ ಯೋಜನೆಯನ್ನು ಜಾರಿಗೊಳಿಸುತ್ತಿದೆ.''ಜನರಿಗೆ ಕೈಗೆಟಕುವ ದರದಲ್ಲಿ, ಸುಲಭವಾಗಿ ಔಷಧಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ. ಆದರೆ ಬ್ರಾಂಡೆಡ್ ಔಷಧಗಳಿಗೆ ಸಮನಾದ ಜನರಿಕ್ ಔಷಧಗಳನ್ನು ವೈದ್ಯರು ಸೂಚಿಸದೇ ಹೋದರೆ ಮಾರಾಟ ಸಾಧ್ಯವಿಲ್ಲ. ವೈದ್ಯರು ಬರೆದ ಔಷಧಕ್ಕೆ ಪರ್ಯಾಯವಾದ ಜನರಿಕ್ ಔಷಧಗಳನ್ನು ನೀಡಲು ಫಾರ್ಮಸಿಸ್ಟರಿಗೆ ಅನುಮತಿ ನೀಡಬೇಕು,''ಎಂದವರು ಹೇಳಿದರು.