ವಿವಿಐಪಿ ಕಾಪ್ಟರ್ ವ್ಯವಹಾರದ ಹಿಂದಿನ ‘ಚಾಲಕ ಶಕ್ತಿ’ ಸೋನಿಯಾ:ಇಟಲಿ ಕೋರ್ಟ್
ಹೊಸದಿಲ್ಲಿ,ಎ.26: ವಿವಿಐಪಿ ಹೆಲಿಕಾಪ್ಟರ್ ವ್ಯವಹಾರವನ್ನು ಕುದುರಿಸಲು ಲಂಚ ನೀಡಿದ್ದ ಪ್ರಕರಣದಲ್ಲಿ ಆಗಸ್ಟಾ ವೆಸ್ಟ್‌ಲ್ಯಾಂಡ್‌ನ ಮುಖ್ಯಸ್ಥ ಗಿಸೆಪ್ಪೆ ಒರ್ಸಿ ಅವರನ್ನು ದೋಷಿಯೆಂದು ಘೋಷಿಸಿರುವ ಇಟಲಿಯ ನ್ಯಾಯಾಲಯವು,ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಜೊತೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಆಪ್ತ ಸಹಾಯಕರೊಂದಿಗೆ ಆಗಸ್ಟಾ ಹೇಗೆ ಲಾಬಿ ನಡೆಸಿತ್ತು ಎನ್ನುವುದನ್ನು ತನ್ನ ತೀರ್ಪಿನಲ್ಲಿ ವಿವರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸೋನಿಯಾ ಈ ವ್ಯವಹಾರದ ಹಿಂದಿನ ‘ಚಾಲಕ ಶಕ್ತಿ’ಯಾಗಿದ್ದರು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಬಣ್ಣಿಸಿದ್ದಾರೆನ್ನಲಾಗಿದೆ.
ಇದು ಆಡಳಿತ ಬಿಜೆಪಿ ಕೈಗೆ ಹೊಸ ಅಸ್ತ್ರವೊಂದನ್ನು ನೀಡಿದೆ. ಉತ್ತರಾಖಂಡ ವಿಷಯದಲ್ಲಿ ರಾಜ್ಯಸಭಾ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡುತ್ತಿರುವ ಮುಖ್ಯ ಪ್ರತಿಪಕ್ಷವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಪ್ರಯತ್ನವಾಗಿ ಬಿಜೆಪಿಯು ಯುಪಿಎ ಆಡಳಿತದಲ್ಲಿ ನಡೆದಿದ್ದ ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ವ್ಯವಹಾರದಲ್ಲಿ ಲಂಚ ವಿಷಯದಲ್ಲಿ ಸೋನಿಯಾ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಜ್ಜಾಗುತ್ತಿದೆ.
3,600ಕೋ.ರೂ.ಗಳ ಕಾಪ್ಟರ್ ವ್ಯವಹಾರವನ್ನು ಕುದುರಿಸಲು ಆಗಸ್ಟಾ ಹಿರಿಯ ಕಾಂಗ್ರೆಸ್ ನಾಯಕರಿಗೆ ಲಂಚ ಪಾವತಿಸಿದ್ದನ್ನು ಇಟಲಿ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ವಿವರಿಸಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಆ ಪಕ್ಷವನ್ನು ಹಣಿಯಲು ಕಾರ್ಯತಂತ್ರ ರೂಪಿಸಲು ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಪಕ್ಷದ ಉನ್ನತ ನಾಯಕರು ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಸೇರಿದಂತೆ ಸಂಸದೀಯ ಪಕ್ಷದ ನಾಯಕರು ಮಂಗಳವಾರ ಇಲ್ಲಿ ಸಭೆ ಸೇರಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿಯೂ ಈ ವಿಷಯವು ಪ್ರಸ್ತಾಪಗೊಂಡಿದ್ದು, ವಿವಾದಾತ್ಮಕ ಏರ್‌ಸೆಲ್-ಮ್ಯಾಕ್ಸಿಸ್ ಒಪ್ಪಂದ ಮತ್ತು ಇಷ್ರತ್ ಜಹಾನ್ ಎನಕೌಂಟರ್ ಪ್ರಕರಣದಲ್ಲಿಯ ಪ್ರಮಾಣಪತ್ರಗಳ ಬಗ್ಗೆಯೂ ಕಾಂಗ್ರೆಸನ್ನು ಗುರಿಯಾಗಿಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ನೆಹರು-ಗಾಂಧಿ ಕುಟುಂಬದ ಬದ್ಧವೈರಿಯಾಗಿರುವ,ಮಂಗಳವಾರವಷ್ಟೇ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸುಬ್ರಮಣಿಯನ್ ಸ್ವಾಮಿ ಅವರು ಬುಧವಾರ ಸದನದಲ್ಲಿ ಕಾಪ್ಟರ್ ವ್ಯವಹಾರ ವಿಷಯವನ್ನೆತ್ತಲಿದ್ದಾರೆ. ಲೋಕಸಭೆಯಲ್ಲಿ ಸಂಸದೆ ಮೀನಾಕ್ಷಿ ಲೇಖಿ ಅವರಿಗೆ ಈ ಕಾರ್ಯವನ್ನು ವಹಿಸಲಾಗಿದೆ.
ಆಗಸ್ಟಾ ಹಗರಣ: ಸೋನಿಯಾ ಸ್ಪಷ್ಟನೆ ನೀಡಲಿ
ಆಗಸ್ಟಾ ವೆಸ್ಟಾಲ್ಯಾಂಡ್ ಹೆಲಿಕಾಪ್ಟರ್ ಅವ್ಯವಹಾರ ಹಗರಣದಲ್ಲಿ ಇಟಲಿ ನ್ಯಾಯಾಲಯದ ತೀರ್ಪನ್ನು, ಸೋನಿಯಾ ಗಾಂಧಿ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಈ ಬಹುಕೋಟಿ ಹಗರಣದಲ್ಲಿ ಶಾಮೀಲಾದ ಕಾಂಗ್ರೆಸ್ ನಾಯಕರ ಹೆಸರನ್ನು ಬಹಿರಂಗಪಡಿಸುವಂತೆ ಅದು ಆಗ ರಕ್ಷಣಾ ಸಚಿವರಾಗಿದ್ದ ಎ.ಕೆ.ಆ್ಯಂಟನಿಯವರನ್ನು ಆಗ್ರಹಿಸಿದೆ.
ಆಗಸ್ಟಾವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ವ್ಯವಹಾರ ಕುದುರಿಸಲು ಲಂಚ ನೀಡಿದ ಇಟಲಿಯ ಅಧಿಕಾರಿಗಳನ್ನು ತಪ್ಪಿತಸ್ಥರೆಂದು ಇಟಲಿ ನ್ಯಾಯಾಲಯ ಘೋಷಿಸಿದ ಬಳಿಕ ಅವರಿಗೆ ಲಂಚ ನೀಡಿದವರ್ಯಾರು ಎಂಬುದನ್ನು ತಿಳಿದುಕೊಳ್ಳಲು ಬಯಸಿರುವುದಾಗಿ ಪಕ್ಷವು ತಿಳಿಸಿದೆ.
ಇಟಲಿ ನ್ಯಾಯಾಲಯದ ಆದೇಶದಲ್ಲಿ ಸೋನಿಯಾ ಹೆಸರು ಉಲ್ಲೇಖಿಸಲ್ಪಟ್ಟಿರುವ ಬಗ್ಗೆ ಅವರು ಸ್ಪಷ್ಟೀಕರಣ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ.