ಚುಟುಕು ಸುದ್ದಿಗಳು
ಇಂದಿನ ಕಾರ್ಯಕ್ರಮ
ರಜತ ಮಹೋತ್ಸವ: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ನೃತ್ಯನಿಕೇತನ ಕೊಡವೂರು ಇದರ ರಜತ ಮಹೋತ್ಸವದ ಸರಣಿ ಕಾರ್ಯಕ್ರಮದಲ್ಲಿ ನೃತ್ಯನಿಕೇತನದ ವಿದ್ಯಾರ್ಥಿಗಳಿಂದ ನೃತ್ಯೋಲ್ಲಾಸ. ಸಮಯ: ಸಂಜೆ 7ಕ್ಕೆ. ಸ್ಥಳ: ಶ್ರೀಕೃಷ್ಣ ಮಠದ ರಾಜಾಂಗಣ, ಉಡುಪಿ.
ಪೇಜಾವರ ಶ್ರೀ ಪಂಚಮ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಪುರಾಣ ವಿದ್ವಾನ್ ಬಹ್ಮಣ್ಯಾಚಾರ್‌ರಿಂದ ಪ್ರವಚನ, 5:45ಕ್ಕೆ ಧಾರ್ಮಿಕ ಉಪನ್ಯಾಸ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರಿಂದ. ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. 7ಕ್ಕೆ ರಾಜಾಂಗಣದಲ್ಲಿ ನೃತ್ಯನಿಕೇತನ ವಿದ್ಯಾರ್ಥಿಗಳಿಂದ ನೃತ್ಯೋಲ್ಲಾಸ. 7ಕ್ಕೆ ಅಖಂಡ ಸಪ್ತೋತ್ಸವ, ಬ್ರಹ್ಮರಥೋತ್ಸವ, ಮಹಾಪೂಜಾ ರಥೋತ್ಸವ.
ನಾಳೆ ಬಿಐಟಿಯಲ್ಲಿ ರಾಷ್ಟ್ರ ಮಟ್ಟದ ಕಾರ್ಯಾಗಾರ
ಮಂಗಳೂರು,ಎ.26: ಶೈಕ್ಷಣಿಕ ಕ್ಷೇತ್ರದ 110 ವರ್ಷಗಳ ಸಂಭ್ರಮದಲ್ಲಿರುವ ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ಪ್ರವರ್ತಿತ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ದ ಯಾಂತ್ರಿಕ ವಿಭಾ ಗವು ಎ.28ರಂದು ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಆಯೋಜಿಸಿದೆ. ‘ಆರ್ಟಿಫಿಶಿಯಲ್ ನ್ಯೂರಲ್ ನೆಟ್‌ವರ್ಕ್’ ಎಂಬ ವಿಷಯದಲ್ಲಿ ನಡೆಯಲಿರುವ ಕಾರ್ಯಾಗಾರಕ್ಕೆ ತಾಂತ್ರಿಕ ಕ್ಷೇತ್ರದ ಆಸಕ್ತರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಮನುಷ್ಯನ ಮೆದುಳಿನ ಕಾರ್ಯಕ್ಷಮತೆಯ ಸರಿಸಮನಾಗಿ ಹೊರಹೊಮ್ಮಿರುವ ‘ಕೃತಕ ನರ ತಂತ್ರಜಾಲ’ ಎಂಬ ವಿಷಯದ ಮೇಲೆ ಕಾರ್ಯಾಗಾರ ಕೇಂದ್ರೀಕೃತವಾಗಿದ್ದು, ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕ ಡಾ. ಶ್ರೀನಿವಾಸ ಪೈ, ಸುರತ್ಕಲ್ ಎನ್‌ಐಟಿಕೆಯ ಡಾ. ಶ್ರೀಕಾಂತ ರಾವ್, ಮಣಿಪಾಲ ತಾಂತ್ರಿಕ ಕಾಲೇಜಿನ ಡಾ. ವಿಜಯ್ ಎಜಿ.ಎಸ್. ವಿಷಯ ಮಂಡಿಸಲಿರುವರು ಎಂದು ಕಾರ್ಯಾಗಾರದ ಸಂಯೋಜಕ ಪ್ರೊ. ರೋನಕ್ ಅಹ್ಮದ್, ಡಾ. ಶಿವಪ್ರಸಾದ್ ಕೆ.ವಿ., ಪ್ರೊ. ಶ್ರೀಧರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಯಶಸ್ಸಿಗೆ ಕರೆ
ಉಡುಪಿ, ಎ.26: ಮೂಳೂರು ಮರ್ಕಝ್ ಕ್ಯಾಂಪಸ್‌ನಲ್ಲಿ ಎ.27ರಂದು ಅಪರಾಹ್ನ ನಡೆಯಲಿರುವ ಗಲ್ಫ್ ಮೀಟ್‌ನಲ್ಲಿ ಊರಿನಲ್ಲಿರುವ ಡಿಕೆಎಸ್ಸಿಯ ಗಲ್ಪ್‌ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಉಳ್ಳಾಲ ಅರೆಮೆಕ್ಸ್ ಹಾಗೂ ಮಾಜಿ ಕಾರ್ಯಾಧ್ಯಕ್ಷ ಇಸ್ಮಾಯೀಲ್ ಹಾಜಿ ಕಿನ್ಯ ಜಂಟಿ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.
ಮೀನುಗಾರರಿಗೆ ವಿವಿಧ ಸವಲತ್ತುಗಳ ವಿತರಣೆ
ಉಡುಪಿ, ಎ.26: ಜನರಿಗಾಗಿಯೇ ಸರಕಾರಗಳಿದ್ದು, ಜನರು ಸರಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಮೀನುಗಾರಿಕಾ ಇಲಾಖೆಯ ಆವರಣದಲ್ಲಿ ಮಂಗಳವಾರ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೀನುಗಾರರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಡಿ ಇಬ್ಬರು ಫಲಾನುಭವಿಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಯಿತು. ನಾಡದೋಣಿ ಯಾಂತ್ರೀಕರಣಕ್ಕೆ ಸಹಾಯಧನ ಯೋಜನೆಯಡಿ 25 ಫಲಾನುಭವಿಗಳಿಗೆ 7.50ಲಕ್ಷ ರೂ.ಗಳ ಸಹಾಯಧನ ವಿತರಿಸಲಾಯಿತು. ಬಲೆ ಕಿಟ್ ಯೋಜನೆ ಯಡಿ 13 ಮಂದಿ ಫಲಾನುಭವಿಗಳಿಗೆ 1.30 ಲಕ್ಷ ರೂ. ಗಳ ಸಲಕರಣೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಾರ್ಶ್ವನಾಥ್, ಅಂಜನಾದೇವಿ, ಚಂದನ್ ಹಾಗೂ ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಳೆ ವಿದ್ಯುತ್ ನಿಲುಗಡೆ
ಉಡುಪಿ, ಎ.26: ಹಿರಿಯಡ್ಕ 110/33/11 ಕೆ.ವಿ. ಉಪವಿದ್ಯುತ್ ಸ್ಥಾವರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ಉಪಸ್ಥಾವರದಿಂದ ಹೊರಡುವ ಎಲ್ಲ 33/11 ಕೆವಿ ಫೀಡರ್‌ನಲ್ಲಿ ಎ.28ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾರ್ಕಳ ನಗರ ಭಾಗಶಃ, ನಕ್ರೆ, ಹಿರ್ಗಾನ, ಬೈಲೂರು, ಅಜೆಕಾರು, ಶಿರ್ಲಾಲು, ಚಾರ, ಹೆಬ್ರಿ, ಶಿವಪುರ, ಖಜಾನೆ, ಮುದ್ರಾಡಿ, ವರಂಗ, ಮುನಿಯಾಲು, ಬಚ್ಚಪ್ಪು, ಕಬ್ಬಿನಾಲೆ, ಸೀತಾನದಿ, ಸೋಮೇಶ್ವರ, ನಾಡ್ಪಾಲು, ಬೆಳೆಂಜೆ, ಮಡಾಮಕ್ಕಿ, ಮಂಡಾಡಿಜೆಡ್ಡು, ಜೋಮ್ಲು, ಕುಚ್ಚೂರು, ಮಣಿಪಾಲ-ಮಾಹೆ ಪ್ರದೇಶ ವ್ಯಾಪ್ತಿ, ದೇವರ್ ಪಾವರ್ ಲಿಮಿಟೆಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.
ನಾಳೆಯಿಂದ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಶಿಪ್
ಕಾಪು, ಎ.26: ಪುರುಷರ ಮತ್ತು ಮಹಿಳೆಯರ 39ನೆ ರಾಷ್ಟ್ರೀಯ ಸೀನಿಯರ್ ಥ್ರೋಬಾಲ್ ಚಾಂಪಿಯನ್‌ಶಿಪ್ ಎ.28ರಿಂದ 30ರವರೆಗೆ ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಆವರಣದಲ್ಲಿ ನಡೆಯಲಿದೆ ಎಂದು ಟೂರ್ನಿಯ ಸಂಘಟಕ, ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಯ ಅಧ್ಯಕ್ಷ ಕೆ.ಪಿ. ಆಚಾರ್ಯ ಕಾಪುವಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕರ್ನಾಟಕ ಅಮೆಚೂರು ಥ್ರೋಬಾಲ್ ಸಂಸ್ಥೆ, ಉಡುಪಿ ಜಿಲ್ಲಾ ಥ್ರೋಬಾಲ್ ಸಂಸ್ಥೆ ಹಾಗೂ ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಈ ಟೂರ್ನಿ ನಡೆಯಲಿದೆ. ಇದರಲ್ಲಿ ದೇಶದ 27 ರಾಜ್ಯಗಳ ಪುರುಷ ಮತ್ತು ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. 750 ಆಟಗಾರರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. ಎ.28ರಂದು ಬೆಳಗ್ಗೆ 9ಕ್ಕೆ ಕಾಪು ಪಟ್ಟಣದಿಂದ ತಂಡಗಳ ಆಟಗಾರರು ಪಥಸಂಚಲನ ಹಾಗೂ ಮೆರವಣಿಗೆ ಮೂಲಕ ವಿದ್ಯಾನಿಕೇತನ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ. 9:30ಕ್ಕೆ ರಾಜ್ಯ ಕ್ರೀಡಾಸಚಿವ ಅಭಯಚಂದ್ರ ಜೈನ್ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಲಿದ್ದಾರೆ.