ತಲೆಕಡಿಯುವ ಹೇಳಿಕೆ ಉವೈಸಿಗೆ ಪ್ರತಿಕ್ರಿಯೆಯಾಗಿತ್ತಷ್ಟೇ: ಬಾಬಾ ರಾಮ್‌ದೇವ್
ಹೊಸದಿಲ್ಲಿ,ಎ.26: ಕಾನೂನೊಂದು ಇಲ್ಲದಿದ್ದರೆ ‘ಭಾರತ ಮಾತಾ ಕೀ ಜೈ’ ಎಂದು ಹೇಳಲು ನಿರಾಕರಿಸುವವರ ತಲೆಗಳನ್ನು ತಾನು ಕಡಿಯುತ್ತಿದ್ದೆ ಎಂಬ ತನ್ನ ಹೇಳಿಕೆಯಿಂದ ಯೋಗಗುರು ರಾಮ್‌ದೇವ್ ಹಿಂದೆ ಸರಿದಿರುವಂತಿದೆ.ತನ್ನ ಕುತ್ತಿಗೆಯ ಮೇಲೆ ಚೂರಿಯಿಟ್ಟರೂ ತಾನು ‘ಭಾರತ ಮಾತಾ ಕೀ ಜೈ’ ಎಂದು ಹೇಳುವುದಿಲ್ಲ ಎಂಬ ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿಯ ಹೇಳಿಕೆಗೆ ತಾನು ಪ್ರತಿಕ್ರಿಯಿಸಿದ್ದೆನಷ್ಟೇ ಎಂದು ಅವರು ಮಂಗಳವಾರ ಇಲ್ಲಿ ಸಮಜಾಯಿಷಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇಸ್ಲಾಂ ಮತ್ತು ಕ್ರಿಶ್ಚಿಯನ್‌ನಂತಹ ಧರ್ಮಗಳನ್ನು ಅವಮಾನಿಸುವುದು ಉವೈಸಿಯ ಮೂರ್ಖತನದ ಹೇಳಿಕೆಯಿದ್ದಂತೆ ಎಂದು ಹೇಳಿದರು.
ನಾನು ಅಹಿಂಸೆ,ಸಹಜೀವನ ಮತ್ತು ಏಕತೆಯಲ್ಲಿ ನಂಬಿಕೆಯಿರಿಸಿದ್ದೇನೆ. ನನ್ನ ತಲೆಯನ್ನು ಬೇಕಾದರೆ ಕತ್ತರಿಸಿ,ಆದರೆ ನಾನು ಕುರ್‌ಆನ್ ಅಥವಾ ಬೈಬಲ್‌ನ್ನು ಗೌರವಿಸುವುದಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ನನಗೆ ನನ್ನ ಧರ್ಮದ ಬಗ್ಗೆ ಹೆಮ್ಮೆಯಿದೆ,ಆದರೆ ಇತರ ಧರ್ಮಗಳನ್ನು ಅವಮಾನಿಸಲು ಅದು ನನಗೆ ಪರವಾನಿಗೆ ನೀಡುವುದಿಲ್ಲ. ಅದು ಉವೈಸಿಯಷ್ಟೇ ಮೂರ್ಖತನದ್ದಾಗುತ್ತದೆ ಎಂದರು.
...........................
ದೇಶದಲ್ಲಿ ಪ್ರತಿವರ್ಷ 5 ವರ್ಷದೊಳಗಿನ 10 ಲಕ್ಷಕ್ಕೂ ಅಧಿಕ ಮಕ್ಕಳ ಸಾವು: ನಡ್ಡಾ
ಹೊಸದಿಲ್ಲಿ,ಎ.26: ಭಾರತದಲ್ಲಿ ಪ್ರತಿ ವರ್ಷ ಐದು ವರ್ಷದೊಳಗಿನ 10 ಲಕ್ಷಕ್ಕೂ ಅಧಿಕ ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಮತ್ತು ಈ ಪೈಕಿ ಶೇ.57ರಷ್ಟು ಸಾವುಗಳು ಜನನದ ಮೊದಲ 28 ದಿನಗಳಲ್ಲಿ ಸಂಭವಿಸುತ್ತಿವೆ. ಅವಧಿಗೆ ಪೂರ್ವ ಹೆರಿಗೆ,ಕಡಿಮೆ ತೂಕ ಮತ್ತು ಜನನದ ಬಳಿಕದ ಸೋಂಕು ಇತ್ಯಾದಿಗಳು ಈ ಸಾವುಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.
ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್(ಎಸ್‌ಆರ್‌ಎಸ್)2013ರ ಅಂಕಿಅಂಶಗಳಂತೆ ದೇಶದಲ್ಲಿ ಪ್ರತಿವರ್ಷ ಐದು ವರ್ಷದೊಳಗಿನ 12.60ಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದ ಅವರು,ನ್ಯುಮೋನಿಯಾ ಮತ್ತು ಅತಿಸಾರ ಜನನದ ನಂತರದ ಐದು ವರ್ಷಗಳ ಅವಧಿಯಲ್ಲಿ ಮಕ್ಕಳ ಸಾವುಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದರು.
ಶೀತಲ ದಾಸ್ತಾನು ಕೇಂದ್ರಗಳಲ್ಲಿ ಅಗತ್ಯ ಲಸಿಕೆಗಳ ದಾಸ್ತಾನಿನ ಮೇಲೆ ನಿಗಾಯಿರಿಸಲು ಸರಕಾರವು ಎಸ್ಸೆಮ್ಮೆಸ್ ಆಧಾರಿತ ವಿದ್ಯುನ್ಮಾನ ಲಸಿಕೆ ಬೇಹು ಜಾಲವೊಂದಕ್ಕೆ ಚಾಲನೆ ನೀಡಿದೆ ಎಂದು ಅವರು ತಿಳಿಸಿದರು. ಈ ದಾಸ್ತಾನು ಕೇಂದ್ರಗಳು ಉತ್ತರ ಪ್ರದೇಶ,ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿಯ 160 ಜಿಲ್ಲೆಗಳಲ್ಲಿ ಹರಡಿಕೊಂಡಿವೆ ಎಂದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಮೃತ ಶಿಶುಗಳ ಜನನ ಪ್ರಮಾಣವು ಪ್ರತಿ 1,000 ಹೆರಿಗೆಗಳಿಗೆ 40ರಷ್ಟಿದ್ದು, ನವಜಾತ ಶಿಶುಗಳ ಮರಣದ ಪ್ರಮಾಣವು ಪ್ರತಿ 1,000 ಹೆರಿಗೆಗಳಿಗೆ 28ರಷ್ಟಿದೆ ಎಂದು ತಿಳಿಸಿದರು.