×
Ad

ರಾಜ್ಯಸಭೆಯಲ್ಲಿ ಉತ್ತರಾಖಂಡ ಕಿಡಿ: ಕಲಾಪ ಮತ್ತೆ ವ್ಯರ್ಥ

Update: 2016-04-26 23:42 IST

 ಹೊಸದಿಲ್ಲಿ, ಎ.26: ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಕುರಿತು ಕಾಂಗ್ರೆಸ್ ನೇತೃತ್ವದ ಪ್ರತಿಭಟನೆ ಸತತ ಎರಡನೆ ದಿನವಾದ ಮಂಗಳವಾರವೂ ರಾಜ್ಯಸಭೆಯ ಕಲಾಪವನ್ನು ವ್ಯರ್ಥಗೊಳಿಸಿತು.ಪದೇಪದೇ ಮುಂದೂಡಿಕೆಗೆ ಸಾಕ್ಷಿಯಾದ ಸದನವು ಅಂತಿಮವಾಗಿ ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು.

ಬೆಳಗ್ಗೆ ಸದನವು ಸಮಾವೇಶಗೊಂಡಾದ ಬಾಕ್ಸರ್ ಮೇರಿ ಕೋಮ್ ಸೇರಿದಂತೆ ಐವರು ನೂತನ ಸದಸ್ಯರು ಪ್ರಮಾಣ ವಚನವನ್ನು ಸ್ವೀಕರಿಸಿದರು. ಸದನದಲ್ಲಿ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿಯವರು ನೂತನ ಸದಸ್ಯರನ್ನು ಅಭಿನಂದಿಸಿದರು.
ನೂತನ ಸದಸ್ಯರ ಪ್ರಮಾಣವಚನ ಸ್ವೀಕಾರದ ಬಳಿಕ ಕೋಲಾಹಲಕ್ಕೆ ಸದನವು ಸಾಕ್ಷಿಯಾಯಿತು. ಉತ್ತರಾಖಂಡದಲ್ಲಿ ಹರೀಶ್ ರಾವತ್ ಸರಕಾರದ ವಜಾ ಕುರಿತು ಸೂಚನೆಯ ಮೇಲೆ ಚರ್ಚೆಗೆ ತಮ್ಮ ಬೇಡಿಕೆಯನ್ನು ಸರಕಾರವು ನಿರಾಕರಿಸಿದ ನಂತರ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲಿ ನೆರೆದು ಘೋಷಣೆಗಳನ್ನು ಕೂಗತೊಡಗಿದರು.
ಗದ್ದಲ,ಕೋಲಾಹಲದಿಂದಾಗಿ ಸದನವನ್ನು ಪದೇಪದೇ ಮುಂದೂಡಿದ ಸಭಾಪತಿಗಳು ಮಧ್ಯಾಹ್ನ ಮೂರು ಗಂಟೆಗೆ ಅಂತಿಮವಾಗಿ ದಿನದ ಮಟ್ಟಿಗೆ ಮುಂದೂಡಿದರು.
ಇದಕ್ಕೂ ಮುನ್ನ ವಿತ್ತಸಚಿವ ಅರುಣ ಜೇಟ್ಲಿ ಅವರು, ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಘೋಷಣೆ ಹೊರತು ಪಡಿಸಿ ಬೇರೆ ಯಾವುದೇ ವಿಷಯದ ಕುರಿತು ಚರ್ಚೆಗೆ ಅವಕಾಶವಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯನ್ನು ಸಮರ್ಥಿಸಿಕೊಂಡ ಜೇಟ್ಲಿ,ಉತ್ತರಾಖಂಡ ವಿಧಾನಸಭೆಯ 67 ಸದಸ್ಯರ ಪ್ಯಕಿ 35 ಸದಸ್ಯರು ಧನ ವಿನಿಯೋಗ ಮಸೂದೆಯ ವಿರುದ್ಧ ಮತ ಚಲಾಯಿಸಿದ್ದರೂ ಸ್ಪೀಕರ್ ಅದನ್ನು ಕಡೆಗಣಿಸಿ ಮಸೂದೆಯು ಅಂಗೀಕಾರವಾಗಿದೆ ಎಂದು ಘೋಷಿಸಿದಾಗಲೇ ರಾಜ್ಯದಲ್ಲಿ ಸಂವಿಧಾನ ವ್ಯವಸ್ಥೆಯು ಕುಸಿದುಬಿದ್ದಿತ್ತು ಎಂದು ಹೇಳಿದರು. ಚರ್ಚೆಗೆ ಅವಕಾಶವಿಲ್ಲ ಎಂದು ಜೇಟ್ಲಿ ಹೇಳಿದ ಬಳಿಕ ಕಾಂಗ್ರೆಸ್ ಸದಸ್ಯರು ‘ಮೋದಿ ತೇರಿ ತಾನಾಶಾಹಿ ನಹೀಂ ಚಲೇಗಿ,ನಹೀಂ ಚಲೇಗಿ(ಮೋದಿಯವರ ಸರ್ವಾಧಿಕಾರ ನಡೆಯುವುದಿಲ್ಲ)’ಎಂದು ಘೋಷಣೆಗಳನ್ನು ಕೂಗಿದರು. ಗದ್ದಲದ ವಾತಾವರಣ ನಿರ್ಮಾಣಗೊಂಡಾಗ ಸದನವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು. ಸದನವು ಮರು ಸಮಾವೇಶಗೊಂಡ ಬಳಿಕವೂ ಕೋಲಾಹಲ ಮುಂದುವರಿದು ಪದೇಪದೇ ಮುಂದೂಡಿಕೆಗಳ ಬಳಿಕ ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News