ಬಯಲು ಶೌಚ ಮಾಡಿದರೆ 200 ರೂ. ದಂಡ: ಬಂಟ್ವಾಳ ಪುರಸಭಾ ಸಾಮಾನ್ಯ ಸಭೆಯಲ್ಲಿ ನಿರ್ಧಾರ
ಬಂಟ್ವಾಳ, ಎ.26: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಬಯಲು ಶೌಚ ಮಾಡಿದರೆ 200 ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ.
ಪುರಸಭಾ ವ್ಯಾಪ್ತಿಯನ್ನು ಬಯಲು ಶೌಚಮುಕ್ತ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವರ ಅಧ್ಯಕ್ಷತೆಯಲ್ಲಿ ಮಂಗಳವಾರ ಪುರಸಭೆ ಸಭಾಂಗ ಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಶೌಚಾಲಯವಿಲ್ಲದ ಪುರಸಭಾ ನಾಗರಿಕರು ಒಂದು ವಾರದೊಳಗೆ ಪುರಸಭೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಸದಸ್ಯರು ಕೂಡಾ ಸಹಕರಿಸಬೇಕು. ಮೇ ತಿಂಗಳಿನಲ್ಲಿ ಬಂಟ್ವಾಳ ಪುರಸಭೆ ಯನ್ನು ಬಯಲು ಶೌಚಮುಕ್ತ ಪ್ರದೇಶವಾಗಿ ಘೋಷಿಸಲಾಗುವುದು ಎಂದು ಮುಖ್ಯಾ ಧಿಕಾರಿ ಸುಧಾಕರ ಸಭೆಗೆ ತಿಳಿಸಿದರು
. ಸದಸ್ಯೆ ಚಂಚಲಾಕ್ಷಿ ವಿಷಯ ಪ್ರಸ್ತಾವಿಸಿ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರಿನ ಗೂಡಿನಬಳಿಯ ನೇತ್ರಾವತಿ ನದಿ ತೀರದಲ್ಲಿ ಬಹುಸಂಖ್ಯೆಯ ವಲಸೆ ಕಾರ್ಮಿಕರು ಬೀಡುಬಿಟ್ಟಿದ್ದು, ನದಿ ತೀರದಲ್ಲೇ ಶೌಚ ಮಾಡುವುದಲ್ಲದೆ ನದಿ ನೀರನ್ನೂ ಮಲಿನಗೊಳಿಸುತ್ತಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್ ಭಟ್, ವಲಸೆ ಕಾರ್ಮಿಕರು ಬೀಡುಬಿಟ್ಟಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಶೌಚಾಲಯವನ್ನು ಬಳಸುವಂತೆ ಅವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದರು. ಕಸ ಸಂಗ್ರಹಕಾರರು ಪುರಸಭಾ ಸದಸ್ಯರ ಹೆಸರು ಹೇಳಿಕೊಂಡು ಪುರಸಭೆ ವಿಧಿಸಿದ ಶುಲ್ಕಕ್ಕಿಂತ ಮೂರು ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಸದಸ್ಯ ಗೋವಿಂದಪ್ರಭು ಪ್ರಶ್ನಿಸಿದರು. ಇದಕ್ಕೆ ಧ್ವನಿ ಗೂಡಿಸಿದ ಸದಸ್ಯ ಮುನೀಶ್ ಅಲಿ, ಕಸ ಸಂಗ್ರಹಕಾರರು ರಸ್ತೆ ಬದಿಯ ಮನೆಗಳ ಕಸವನ್ನು ಮಾತ್ರ ಸಂಗ್ರಹಿಸು ತ್ತಿದ್ದಾರೆ. ಒಳ ಪ್ರದೇಶದಲ್ಲಿರುವ ಮನೆಗಳ ಕಸ ಸಂಗ್ರಹಕ್ಕೆ ಹೋಗುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಮಕೃಷ್ಣ ಆಳ್ವ ಈ ಬಗ್ಗೆ ಈಗಾಗಲೇ ಕಸ ಸಂಗ್ರಹಕಾರರು ಮತ್ತು ಗುತ್ತಿಗೆದಾರರನ್ನು ಕರೆದು ಎಚ್ಚರಿಕೆ ನೀಡಲಾಗಿದೆ ಎಂದರು. ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಉಪಸ್ಥಿತರಿದ್ದರು. ಸದಸ್ಯರಾದ ಜಗದೀಶ್ ಕುಂದರ್, ಪ್ರವೀಣ್ ಬಿ., ಮೋಹನ್ ಬಿ., ಗಂಗಾಧರ, ಶರೀಫ್, ಸದಾಶಿವ ಶೆಟ್ಟಿ, ಮುಹಮ್ಮದ್ ಇಕ್ಬಾಲ್, ಸುಗುಣಾ ಕಿಣಿ, ಯಾಸ್ಮೀನ್, ಮುಮ್ತಾಝ್ ಬಾನು ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.
111111ಮೇಲ್ದರ್ಜೆಗೆ ಶಿಫಾರಸು
ಪುರಸಭೆೆ ವ್ಯಾಪ್ತಿಗೆ ಹೊಂದಿಕೊಂಡಿರುವ ನರಿಕೊಂಬು, ಅಮ್ಟಾಡಿ, ಗೋಳ್ತಮಜಲು-ಅಮ್ಟೂರು, ಪಂಜುಕಲ್ಲು, ನಾವೂರು ಗ್ರಾಪಂಗಳ ಕೆಲವು ಪ್ರದೇಶಗಳನ್ನು ಸೇರಿಸಿ ಬಂಟ್ವಾಳ ಪುರಸಭೆಯನ್ನು ನಗರಸಭೆೆಯನ್ನಾಗಿಸಿ ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದು. ಈ ಎಲ್ಲ ಗ್ರಾಮದ ಪ್ರದೇಶಗಳ ಹಾಗೂ ಪುರಸಭಾ ವ್ಯಾಪ್ತಿಯನ್ನು ಸೇರಿಸಿ ಸುಮಾರು 53 ಸಾವಿರಕ್ಕೂ ಮೇಲ್ಪಟ್ಟು ಜನಸಂಖ್ಯೆ ಆಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿ ನಕ್ಷೆ ಸಿದ್ಧಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಆಕ್ಷೇಪಗಳ ಸಹಿತ ಕೆಲವೊಂದು ಪ್ರಕ್ರಿಯೆಗಳು ಸರಕಾರಿ ಮಟ್ಟದಲ್ಲಿ ನಡೆಯಲಿದೆ ಎಂದು ಪುರಸಭೆ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಸಭೆಗೆ ಮಾಹಿತಿ ನೀಡಿದರು.