×
Ad

ಐಐಟಿ ಕಾಯ್ದೆ ಬದಲಾಯಿಸಲು ಹೊರಟ ಸ್ಮೃತಿ, ಅನುಮೋದನೆ ನೀಡದ ಡಿವಿ

Update: 2016-04-27 11:12 IST

ಹೊಸದಿಲ್ಲಿ, ಎ. 27 : ಐಐಟಿ ಪಠ್ಯದಲ್ಲಿ ಸಂಸ್ಕೃತ ಸೇರಿಸಬೇಕೆಂದು ಹೇಳಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸಾಕಷ್ಟು ವಿವಾದಕ್ಕೀಡಾದ ಬೆನ್ನಲ್ಲೇ ಅವರ ಸಚಿವಾಲಯ ಐಐಟಿ ಕಾಯ್ದೆಯಲ್ಲೂ ಬದಲಾವಣೆ ತರಲುದ್ದೇಶಿದ್ದ ಸಂಗತಿ ಬಯಲಾಗಿದೆ. ಆದರೆ ಕೇಂದ್ರ ಕಾನೂನು ಸಚಿವಾಲಯ ಇದಕ್ಕೆ ನಕಾರಾತ್ಮಕವಾಗಿ ಸ್ಪಂದಿಸಿದೆಯೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.

ಸಂಸತ್ತಿನ ಅನುಮತಿಯಿಲ್ಲದೆ ಹೊಸ ಐಐಟಿಗಳನ್ನು ರಚಿಸಲು ಕೇಂದ್ರಕ್ಕೆ ಅಧಿಕಾರ ನೀಡುವ ನಿಟ್ಟಿನಲ್ಲಿ ಸ್ಮೃತಿಯವರ ಸಚಿವಾಲಯ ಕಾಯ್ದೆಯಲ್ಲಿ ಬದಲಾವಣೆ ತರಲುದ್ದೇಶಿಸಿತ್ತು ಎಂದು ತಿಳಿದು ಬಂದಿದೆ.

ವರದಿಯ ಪ್ರಕಾರ ಪ್ರಸ್ತಾವಿತ ಶೆಡ್ಯೂಲ್ 2ರಲ್ಲಿ ಸಂಸ್ಥೆಯ ಹೆಸರು ಸೇರಿಸಿದರಷ್ಟೇ ಹೊಸ ಐಐಟಿಯನ್ನು ಸ್ಥಾಪಿಸಲು ಕೇಂದ್ರಕ್ಕೆ ಅಧಿಕರ ನೀಡಲು ಸಚಿವಾಲಯ ಯೋಚಿಸಿತ್ತು. ಈಗಿನ ನಿಯಮಗಳ ಪ್ರಕಾರ ಯಾವುದೇ ಕಾಯ್ದೆಯ ಶೆಡ್ಯೂಲ್ ನಲ್ಲಿ ಬದಲಾವಣೆ ತರಲು ಕೇಂದ್ರಸರಕಾರಕ್ಕೆ ಸಂಸತ್ತಿನ ಅನುಮತಿ ಬೇಕಾಗಿಲ್ಲ.
ಐಐಟಿಗಳಂತಹ ರಾಷ್ಟ್ರೀಯ ಪ್ರಾಮುಖ್ಯತೆ ಪಡೆದಂತಹ ಸಂಸ್ಥೆಗಳನ್ನು ಸ್ಥಾಪಿಸಲು ಸಂಸತ್ತಿನ ಅನುಮೋದನ ಅಗತ್ಯವಾಗಿರುತ್ತದೆ ಎಂದು ಕಾನೂನು ಸಚಿವಾಲಯದ ಮೂಲವೊಂದು ತಿಳಿಸಿದರೆ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ಕಾಯ್ದೆಯ ಶೆಡ್ಯೂಲ್ ಒಂದರಲ್ಲಿ ಬದಲಾವಣೆ ತಂದರೂ ಅದನ್ನು ಅಂತಿಮ ಅನುಮೋದನೆಗಾಗಿ ಸಂಸತ್ತಿನ ಮುಂದೆ ತರಲೇ ಬೇಕಾಗುತ್ತಿದೆ.

ಈ ವಿಚಾರದಲ್ಲಿಪ್ರಧಾನ ಮಂತ್ರಿಗಳ ಕಾರ್ಯಾಲಯವೂ ಸ್ಮೃತಿ ಇರಾನಿಯವರ ಸಚಿವಾಲಯದ ಪರವಾಗಿದ್ದು, ಕ್ಯಾಬಿನೆಟ್ ನೋಟನ್ನು ಮತ್ತೆ ಕಾನೂನು ಸಚಿವಾಲಯಕ್ಕೆ ಅದರ ಅನುಮತಿಗಾಗಿ ಕಳುಹಿಸುವಂತೆ ಹೇಳಿದೆಯೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News