'ದ್ರೌಪದಿ' ವಿರುದ್ಧ ಮಹಿಳಾ ಮತದಾರೆಯ ಮೇಲೆ ಹಲ್ಲೆ ಕೇಸು !
ಕೊಲ್ಕತ್ತಾ, ಎ. 27: ಮಹಿಳಾ ಮತದಾರೆಯ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಮತ ಚಲಾಯಿಸದಂತೆ ತಡೆದ ಆರೋಪದ ಮೇಲೆ ಬಿಜೆಪಿಯ ತಾರಾ ಅಭ್ಯರ್ಥಿ ಮಹಾ ಭಾರತ ಧಾರಾವಾಹಿಯ ‘ದ್ರೌಪದಿ’ ಪಾತ್ರಧಾರಿ ರೂಪಾ ಗಾಂಗೂಲಿಯ ವಿರುದ್ಧ ಮಲಿಪಂಚ್ ಘರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.
‘‘ಉತ್ತರ ಹೌರಾ ಕ್ಷೇತ್ರದ ಅಭ್ಯರ್ಥಿಯಾಗಿರುವ ರೂಪಾ ಗಾಂಗೂಲಿಯವರು ಸೋಮಾ ದಾಸ್ ಎಂಬ ಮತೆದಾರೆಗೆ ಹಲ್ಲೆ ನಡೆಸಿದ್ದಾರೆ’’ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅನುಜ್ ಶರ್ಮ ತಿಳಿಸಿದ್ದಾರೆ.
ಇದಕ್ಕೂ ಮುಂಚೆ ತಮ್ಮ ಕ್ಷೇತ್ರದಲ್ಲಿ ರೂಪಾ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯನ್ನುಅಸೆಂಬ್ಲಿ ಚುನಾವಣೆಯ ನಾಲ್ಕನೇ ಹಂತದ ವೇಳೆ ರೂಪಾ ಎದುರಿಸಬೇಕಾಗಿ ಬಂದಿತ್ತು. ತೃಣಮೂಲ ಕಾಂಗ್ರೆಸ್ಸಿನ ಗೂಂಡಾಗಳು ತನ್ನ ಕ್ಷೇತ್ರದಲ್ಲಿ ವ್ಯಾಪಕವಾಗಿ ಬೂತ್ ವಶೀಕರಣ ಮಾಡಿ ಮತದಾರರನ್ನು ಬೆದರಿಸಿದ್ದಾರೆಂದು ರೂಪಾ ಆರೋಪಿಸಿದ್ದಾರೆ.
‘‘ಬೆಳಿಗ್ಗೆಯಿಂದ ತನಗೆ ಈ ಬಗ್ಗೆ ಕರೆಗಳು ಬರುತ್ತಿದ್ದು ಪೋಲಿಂಗ್ ಏಜಂಟರ ಮೇಲೆ ಹಲ್ಲೆಗೈದು ಅವರನ್ನು ಮತದಾನ ಕೇಂದ್ರಗಳಿಂದ ಹೊರಗಟ್ಟಲಾಗುತ್ತಿದೆಯೆಂದು ತನಗೆ ಮಾಹಿತಿ ಸಿಕ್ಕಿದೆ. ಇದನ್ನು ತಡೆಯಲು ನಾನು ಪ್ರಯತ್ನಿಸಿದಾಗ, ತೃಣಮೂಲ ಗೂಂಡಾಗಳು ನನ್ನನ್ನು ಸುತ್ತುವರಿದು ನಿಂದಿಸಿದರು,’’ಎಂದು ಆಕೆ ದೂರಿದ್ದಾರೆ.
ಆದರೆ ತನ್ನ ಮೇಲೆ ಪ್ರಕರಣ ದಾಖಲಾಗಿದ್ದರೂ ನಟಿ ಯಾವುದೇ ರೀತಿಯಲ್ಲಿ ಎದೆಗುಂದಿದಂತೆ ಕಂಡು ಬಂದಿಲ್ಲ. ‘‘ನನ್ನ ಮೇಲೆ ಪೊಲೀಸ್ ದೂರು ದಾಖಲಿಸಲಾಗಿದ್ದರೂ ನನ್ನನ್ನು ನಿಂದಿಸಿದವರ ವಿರುದ್ಧ ಹಾಗೂ ಚುನಾವಣಾ ಅಕ್ರಮ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ,’’ ಎಂದು ಆಕೆ ಹೇಳಿದ್ದಾರೆ.
ರೂಪಾ ಗಾಂಗೂಲಿಯ ಆರೋಪವನ್ನು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಕ್ರಿಕೆಟ್ ಪಟು ಲಕ್ಷ್ಮಿ ರತನ್ ಶುಕ್ಲಾ ನಿರಾಕರಿಸಿದ್ದು ಗಾಂಗೂಲಿಯೇ ಮತದಾರರ ಮೇಲೆ ಚುನಾವಣೆ ವೇಳೆ ಪ್ರಭಾವ ಬೀರಲೆತ್ನಿಸಿದ್ದರು, ಎಂದು ಆಪಾದಿಸಿದ್ದಾರೆ.