ಅಂಕಿಸಂಖ್ಯೆಗಳ ಕಸರತ್ತು ವಿಟ್ಲ ಪಪಂ ಫಲಿತಾಂಶದ ಕೆಲವು ಹೈಲೆಟ್ಸ್‌ಗಳು
ಬಂಟ್ವಾಳ, ಎ. 27: ಕೆಲವು ತಿಂಗಳುಗಳ ಹಿಂದೆ ಹೊಸದಾಗಿ ಅಸ್ತಿತ್ವಕ್ಕೆ ಬಂದ ವಿಟ್ಲ ಪಟ್ಟಣ ಪಂಚಾಯತ್‌ಗೆ ಎಪ್ರಿಲ್ 24ರಂದು ನಡೆದ ಚೊಚ್ಚಲ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ಬೆಳಗ್ಗೆ ಇಲ್ಲಿನ ಸೈಂಟ್ ರೀಟಾ ಕಾಲೇಜಿನಲ್ಲಿ ನಡೆಯಿತು.
18 ಸ್ಥಾನಗಳ ಪೈಕಿ ಬಿಜೆಪಿ 12, ಕಾಂಗ್ರೆಸ್ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಪಟ್ಟಣ ಪಂಚಾಯತ್‌ನ 9ನೆ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ರವಿಪ್ರಕಾಶ್ ಎಸ್. 510 ಮತಗಳನ್ನು ಪಡೆಯುವ ಮೂಲಕ ಚುನಾವಣೆಗೆ ಸ್ಪರ್ಧಿಸಿದ್ದ ಒಟ್ಟು 43 ಅಭ್ಯರ್ಥಿಗಳಲ್ಲಿಯೇ ಅತೀ ಹೆಚ್ಚು ಮತ ಪಡೆದವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂತೆಯೇ 16ನೆ ವಾರ್ಡ್‌ನಲ್ಲಿ ಸಿಪಿಐಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೇಜಪ್ಪ ಪೂಜಾರಿ ಬರೀ 11 ಮತಗಳನ್ನು ಪಡೆಯುವ ಮೂಲಕ ಎಲ್ಲರಿಗಿಂತ ಅತೀ ಕಡಿಮೆ ಮತಗಳನ್ನು ಪಡೆದವರೆಂದು ಗುರುತಿಸಿಕೊಂಡಿದ್ದಾರೆ.
18ನೆ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಬ್ದುಲ್ ರಹೀಮಾನ್ ಹಸೈನಾರ್ ತನ್ನ ಪ್ರತಿಸ್ಪರ್ಧಿ ಬಿಜೆಪಿಯ ಇಬ್ರಾಹೀಂರವರನ್ನು 335 ಮತಗಳಲ್ಲಿ ಸೋಲಿಸುವ ಮೂಲಕ ಅತೀ ಹೆಚ್ಚು ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಹಾಗೆಯೇ 8ನೆ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕೆ.ಮಾಲತಿ ಮೋನಪ್ಪ ಪೂಜಾರಿ ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸುನೀತ ಕೋಟ್ಯಾನ್ ಮುಂದೆ ಬರೀ 12 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.
ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 6,732 ಪುರುಷ ಹಾಗೂ 6,784 ಮಹಿಳಾ ಮತದಾರರು ಸೇರಿ ಒಟ್ಟು 13,516 ಮಂದಿ ಮತದಾರರ ಪೈಕಿ 5,050 ಮಂದಿ ಪುರುಷರು, 4,913 ಮಂದಿ ಮಹಿಳೆಯರು ಸೇರಿ ಒಟ್ಟು 9,963 ಮಂದಿ ಮತ ಚಲಾಯಿಸಿದ್ದರು.
ಶೇಕಡ 73.71 ಮತದಾನವಾಗಿತ್ತು. 18 ಸ್ಥಾನಗಳಿಗೂ ಸ್ಪರ್ಧಿಸಿದ್ದ ಬಿಜೆಪಿ ಒಟ್ಟು 5,154 ಮತಗಳನ್ನು ಪಡೆದರೆ ಕಾಂಗ್ರೆಸ್ 4,102 ಮತಗಳನ್ನು ಪಡೆದಿದೆ. ಉಳಿದಂತೆ 2 ಸ್ಥಾನಗಳಿಗೆ ಸ್ಪರ್ಧಿಸಿದ್ದ ಎಸ್‌ಡಿಪಿಐ 188, 3 ಸ್ಥಾನಗಳಿಗೆ ಸ್ಪರ್ಧಿಸಿದ್ದ ಸಿಪಿಐ 79, 1 ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ 44 ಮತಗಳನ್ನು ಪಡೆದರೆ ಪಕ್ಷೇತ್ರರಾಗಿ ಸ್ಪರ್ಧಿಸಿದ್ದ ಗಂಗಾಧರ ನಾಯ್ಕ 145 ಪಡೆದಿದ್ದಾರೆ.