ದಿಲ್ಲಿ ವಿವಿ ಪಠ್ಯಪುಸ್ತಕ ವಿವಾದ ‘ದುರದೃಷ್ಟಕರ’:ಭಗತ್‌ಸಿಂಗ್ ಬಂಧು

Update: 2016-04-27 13:21 GMT

ಹೊಸದಿಲ್ಲಿ,ಎ.27: ದಿಲ್ಲಿ ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲಿ ಸ್ವಾತಂತ್ರ ಯೋಧ ಭಗತ್ ಸಿಂಗ್ ಅವರನ್ನು ‘ಕ್ರಾಂತಿಕಾರಿ ಭಯೋತ್ಪಾದಕ’ಎಂದು ಬಣ್ಣಿಸಿರುವುದು ಅತ್ಯಂತ ದುರದೃಷ್ಟಕರವಾಗಿದ್ದು, ಬ್ರಿಟಿಷರು ಸಹ ಅವರನ್ನು ‘ನೈಜ ಕ್ರಾಂತಿಕಾರಿ’ಎಂದು ಬಣ್ಣಿಸಿದ್ದರು ಎಂದು ಹುತಾತ್ಮ ಸ್ವಾತಂತ್ರ ಹೋರಾಟಗಾರನ ಕಿರಿಯ ಸಹೋದರ ಕುಲಬೀರ್ ಸಿಂಗ್ ಅವರ ಪುತ್ರ ಅಭಯ ಸಿಂಗ್ ಸಂಧು ಅವರು ಬುಧವಾರ ಇಲ್ಲಿ ಹೇಳಿದರು.

 ಸ್ವಾತಂತ್ರ ದೊರೆತು 68 ವರ್ಷಗಳ ನಂತರವೂ ದೇಶಕ್ಕಾಗಿ ಬಲಿದಾನ ಮಾಡಿದ ಕ್ರಾಂತಿಕಾರಿಗಳಿಗೆ ಇಂತಹ ಶಬ್ದಗಳು ಬಳಕೆಯಾಗುತ್ತಿರುವುದು ಅತ್ಯಂತ ವಿಷಾದಕರ ಪೂರ್ವ ನಿದರ್ಶನವಾಗಿದೆ. ಭಗತ್ ಸಿಂಗ್ ಅವರನ್ನು ಗಲ್ಲುಗಂಬಕ್ಕೇರಿಸಿದ ಬ್ರಿಟಿಷರು ತಮ್ಮ ತೀರ್ಪಿನಲ್ಲಿ ಅವರನ್ನು ‘ನೈಜ ಕ್ರಾಂತಿಕಾರಿ’ಎಂದು ಬಣ್ಣಿಸಿದ್ದರು. ಅವರು ಸಹ ಭಯೋತ್ಪಾದನೆ ಅಥವಾ ಭೀತಿವಾದ ಎಂಬಂತಹ ಶಬ್ದಗಳನ್ನು ಬಳಸಿರಲಿಲ್ಲ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಂಧು ತಿಳಿಸಿದರು. ಕ್ರಾಂತಿಕಾರಿಗಳಿಗೆ ಇಂತಹ ಶಬ್ದಗಳನ್ನು ಬಳಸುವ ಮೂಲಕ ವಿವಾದವನ್ನೆಬ್ಬಿಸುವ ಯತ್ನ ಅತ್ಯಂತ ದುರದೃಷ್ಟಕರವಾಗಿದೆ ಎಂದರು.

ಬಿಪಿನ ಚಂದ್ರ ಅವರು 1990ರಲ್ಲಿ ಬರೆದಿದ್ದ ಪುಸ್ತಕವು ಬಳಿಕ ತಿದ್ದುಪಡಿಗೊಂಡಿತ್ತು ಮತ್ತು ಅದರಲ್ಲಿ ಭಗತ್ ಸಿಂಗ್‌ರನ್ನು ಕ್ರಾಂತಿಕಾರಿ ಎಂದು ಬಣ್ಣಿಸಲಾಗಿತ್ತು ಎಂದು ಅವರು ಹೇಳಿದರು. ಆದರೆ ಹೊಸ ಆವೃತ್ತಿ ಏನಾಯಿತು ಎನ್ನುವುದು ಯಾರಿಗೂ ಗೊತ್ತಿಲ್ಲ. ಕಳೆದ 26 ವರ್ಷಗಳಿಂದಲೂ ಈ ಅಂಶ ಪುಸ್ತಕದಲ್ಲಿ ಹಾಗೆಯೇ ಉಳಿದುಕೊಂಡಿದೆ,ಅದನ್ನು ತೆಗೆದು ಹಾಕಬೇಕಾಗಿತ್ತು ಎಂದ ಅವರು, ಈ ಪುಸ್ತಕವನ್ನು ಹಿಂದೆಗೆದುಕೊಂಡು ಅದನ್ನು ತಿದ್ದುಪಡಿಗಳೊಂದಿಗೆ ಮರುಪೂರೈಕೆ ಮಾಡುವಂತೆ ಸರಕಾರವನ್ನು ತಾನು ಆಗ್ರಹಿಸುವುದಾಗಿ ಹೇಳಿದರು. ಈ ಪುಸ್ತಕದಲ್ಲಿ ಚಿತ್‌ಗಾಂಗ್ ಚಳವಳಿ ಮತ್ತು ಸ್ಯಾಂಡರ್ಸ್ ಹತ್ಯೆಯನ್ನು ಸಹ ‘ಭಯೋತ್ಪಾದಕ ಕೃತ್ಯ’ಗಳು ಎಂದು ಬಣ್ಣಿಸಲಾಗಿದೆ.

ಈ ವಿಷಯವನ್ನು ಪರಿಶೀಲಿಸುವಂತೆ ಮತ್ತು ಪಠ್ಯಪುಸ್ತಕದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡುವಂತೆ ಭಗತ್ ಸಿಂಗ್ ಕುಟುಂಬವು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವನ್ನು ಆಗ್ರಹಿಸಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News