ಬೀಡಿ ಕಾರ್ಮಿಕರಿಗೆ ಪರ್ಯಾಯವಾಗಿ ಗಾರ್ಮೆಂಟ್ ಕಾರ್ಖಾನೆ ಸ್ಥಾಪನೆಯಾಗಲಿ: ಐವನ್ ಆಗ್ರಹ
ಮಂಗಳೂರು, ಎ.27;ಬೀಡಿ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆಯಾಗಿ ಗಾರ್ಮೆಂಟ್ ಕಾರ್ಖಾನೆಗಳನ್ನು ದ.ಕ ಜಿಲ್ಲೆಯಲ್ಲಿ ಸ್ಥಾಪಿಸಬೇಕೆಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಸರಕಾರದ ಅಂಕಿಅಂಶಗಳ ಪ್ರಕಾರ ದ.ಕ ಜಿಲ್ಲೆಯಲ್ಲಿ 4 ಲಕ್ಷ ಬೀಡಿ ಕಾರ್ಮಿಕರಿದ್ದು ಬೀಡಿ ಉದ್ಯಮ ಬಂದ್ ಆದರೆ ಇವರಿಗೆ ದುಡಿಯಲು ಪರ್ಯಾಯ ವ್ಯವಸ್ಥೆ ಇಲ್ಲದಂತಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗಾರ್ಮೆಂಟ್ ಕಾರ್ಖಾನೆಗಳನ್ನು ಪಿಪಿಪಿ ಆಧಾರದಲ್ಲಿ ಸ್ಥಾಪಿಸಬೇಕು. ಪ್ರತಿ ಕಾರ್ಖಾನೆಯಲ್ಲಿ 5 ಸಾವಿರ ಕಾರ್ಮಿಕರಂತೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಾರ್ಖಾನೆಗಳನ್ನು ಆರಂಭಿಸುವ ಮೂಲಕ ಸುಮಾರು ನಲವತ್ತು ಸಾವಿರ ಕಾರ್ಮಿಕರಿಗೆ ಉದ್ಯೋಗ ನೀಡಬಹುದು ಎಂದು ಹೇಳಿದರು. ಈ ಬಗ್ಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ದೇಶದ ಕಾರ್ಮಿಕ ನೀತಿ 7 ಶೇಕಡದಷ್ಟಿರುವ ಸಂಘಟಿತ ಕಾರ್ಮಿಕರ ಪರವಿದ್ದು 93 ಶೇಕಡದಷ್ಟಿರುವ ಅಸಂಘಟಿತ ಕಾರ್ಮಿಕರು ಕಾರ್ಮಿಕ ನೀತಿಯ ಪ್ರಯೋಜನ ಪಡೆಯುತ್ತಿಲ್ಲ. ಇದಕ್ಕಾಗಿ ಎಲ್ಲಾ ರಾಜ್ಯಗಳಲ್ಲಿಯೂ ರಾಜ್ಯದ ಕಾರ್ಮಿಕ ನೀತಿ ಬರಬೇಕು ಎಂದು ಹೇಳಿದರು.
ದ.ಕ ಜಿಲ್ಲಾ ಕಾರ್ಮಿಕ ವಿಭಾಗದಿಂದ ಕಾರ್ಮಿಕ ದಿನಾಚರಣೆ ಹಾಗೂ ವಿವಿಧ ವರ್ಗದ ಹಿರಿಯ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮೇ 1 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ವಿ ವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿರುವರು . ಸಚಿವರಾದ ಯು.ಟಿ.ಖಾದರ್ ಮತ್ತು ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಂಗಾಮಿ ಜಿಲ್ಲಾಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಕಾಂಗ್ರೆಸ್ ಮುಖಂಡರುಗಳಾದ ಲೋಕೇಶ್ ಹೆಗ್ಡೆ, ನಝೀರ್ ಬಜಾಲ್, ಶೇಖರ್ ದೇರಳಕಟ್ಟೆ, ಮುಹಮ್ಮದ್ ಹನೀಫ್, ಮುಹಮ್ಮದ್, ಮುಹಮ್ಮದ್ ರಫೀ ಮೊದಲಾದವರು ಉಪಸ್ಥಿತರಿದ್ದರು.