ಫ್ಲೆಕ್ಸ್ ನಿಷೇಧ ಕಾನೂನನ್ನು ಗಾಳಿಗೆ ತೂರಿದ ಪರಿಸರ ಸಚಿವರು, ಜಿಲ್ಲಾಡಳಿತ!
ಮಂಗಳೂರು,ಎ.27: ಕರ್ನಾಟಕ ರಾಜ್ಯ ಸರಕಾರ ರಾಜ್ಯದಲ್ಲಿ ಪ್ಲಾಸಿಕ್ ನಿಷೇಧ ಜಾರಿಗೊಳಿಸಿದ್ದರೂ ಮಂಗಳೂರಿನಲ್ಲಿ ಕರ್ನಾಟಕ ಸರಕಾರದ ಇಲಾಖೆಗಳಿಗೆ ಪ್ಲಾಸ್ಟಿಕ್ ನಿಷೇಧ ಕಾನೂನು ಇನ್ನೂ ಅನ್ವಯಿಸಿಲ್ಲ.
ಎ.15 ರಿಂದ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಕಾನೂನು ಜಾರಿಯಲ್ಲಿದೆ. ಇದರ ಪ್ರಕಾರ ಫ್ಲೆಕ್ಸ್‌ಗಳನ್ನು ರಾಜ್ಯದಲ್ಲಿ ಬಳಸುವಂತಿಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ರಾಜ್ಯ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಕಚೇರಿಯ ಮುಂದೆ ನಾಮಫಲಕವಾಗಿ ಹಾಕಲಾಗಿರುವ ಪ್ಲೆಕ್ಸನ್ನು ಇನ್ನು ತೆರವುಗೊಳಿಸಿಲ್ಲ. ದ.ಕ ಜಿಲ್ಲೆಯ ಜನರು ರಾಜ್ಯ ಸರಕಾರದ ಆದೇಶವನ್ನು ಪಾಲಿಸಲು ಮಾದರಿಯಾಗಬೇಕಿದ್ದ ಉಸ್ತುವಾರಿ ಸಚಿವರ ಹೆಸರಿನ ಫ್ಲೆಕ್ಸ್ ಪ್ಲಾಸ್ಟಿಕ್ ನಿಷೇಧವನ್ನು ಅಣಕ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಕಚೇರಿಯೆ ಮುಂದೆ ನಿಂತಿದೆ.
ಇನ್ನು ಸರಕಾರದ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡುವ ಫ್ಲೆಕ್ಸ್‌ಗಳು ನಗರದಲ್ಲಿ ಎಲ್ಲಡೆಯೂ ಕಾಣಸಿಗುತ್ತಿದೆ. ಪ್ಲಾಸ್ಟಿಕ್ ನಿಷೇಧ ಕಾನೂನನ್ನು ಜಾರಿ ಮಾಡುವ ಅಧಿಕಾರಿಗಳು ಕೆಲವು ಫ್ಲೆಕ್ಸ್‌ಗಳನ್ನು ಕಿತ್ತು ತಂದಿದ್ದರೂ ಸರಕಾರದ ಮಾಹಿತಿ ನೀಡುವ ಫ್ಲೆಕ್ಸ್‌ಗಳು ಮಾತ್ರ ರಾರಾಜಿಸುತ್ತಿದೆ.
ದ.ಕ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ , ಐಜಿಪಿ ಕಚೇರಿಯ ಮುಂಭಾಗದಲ್ಲಿ, ಮಿನಿವಿಧಾನಸೌಧದ ಮುಂಭಾಗದಲ್ಲಿ ಹೀಗೆ ಸರಕಾರದ ಮಾಹಿತಿ ನೀಡುವ ಫ್ಲೆಕ್ಸ್‌ಗಳಿಗೆ ಇನ್ನು ಯಾವುದೆ ತೊಂದರೆಯಾಗಿಲ್ಲ.