ಭಟ್ಕಳ: ಮುರ್ಡೇಶ್ವರದಲ್ಲಿ ಗುಂಪು ಘರ್ಷಣೆ

Update: 2016-04-27 16:38 GMT

 ಭಟ್ಕಳ, ಎ. 27: ಮದುವೆಯ ದಿಬ್ಬಣವೊಂದು ಮಸೀದಿ ಮುಂಭಾಗದಿಂದ ತೆರಳುತ್ತಿದ್ದ ವೇಳೆ ಗಲಾಟೆ ಗೌಜು ಮಾಡದಂತೆ ಹೇಳಿದ ಯುವಕನೋರ್ವನ ಮಾತಿಗೆ ಉದ್ರಿಕ್ತಗೊಂಡು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

      ಗುಂಪೊಂದು ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದು, ಇದಕ್ಕೆ ಪ್ರತಿಯಾಗಿ ಯುವಕ ಗುಂಪಿನ ಮೇಲೆ ಕಲ್ಲು ತೂರಾಟ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರ್ಡೇಶ್ವರದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು ಪೊಲೀಸರ ಮದ್ಯಪ್ರವೇಶದಿಂದಾಗಿ ತಿಳಿಗೊಂಡಂತಾಗಿದೆ ಎಂದು ತಿಳಿದು ಬಂದಿದೆ. ಮುರ್ಡೇಶ್ವರದ ಮಸೀದಿಯ ಮುಂಭಾಗದಿಂದ ಮದುವೆ ದಿಬ್ಬಣವೊಂದು ಹಾದು ಹೋಗುತ್ತಿದ್ದ ಸಂದರ್ಭದಲ್ಲಿ ಮಸೀದಿಯಲ್ಲಿ ನಮಾಝ್(ಪ್ರಾರ್ಥನೆ) ನಡೆಯುತ್ತಿತ್ತು ಎನ್ನಲಾಗಿದೆ. ಈ ಸಂದರ್ಭ ಯುವಕನೊಬ್ಬ ಗಲಾಟೆ ಗೌಜು ಮಾಡಬೇಡಿ ಪ್ರಾರ್ಥನೆಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಕ್ಕೆ ಮದುವೆ ಮೆರವಣಿೆಗೆಯಲ್ಲಿದ್ದವರು ಯುವಕನಿಗೆ ಹಲ್ಲೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಯುವಕ ಕಲ್ಲಿನಿಂದ ಅವರ ಮೇಲೆ ಪ್ರತಿ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಎರಡು ಕೋಮಿನ ಮಂದಿ ಪರಸ್ಪರ ಸಂಘರ್ಷಕ್ಕೆ ಇಳಿಯುವಂತಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಕೂಡಲೇ ಮಧ್ಯೆ ಪ್ರವೇಶಿಸಿದ ಪೊಲೀಸರು ಗುಂಪು ಘರ್ಷಣೆಯನ್ನು ತಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧನಕ್ಕೆ ಆಗ್ರಹ:   

ಮದುವೆ ಮರೆವಣಿಗೆಯನ್ನು ತಡೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಯುವಕನನ್ನು ಬಂಧಿಸುವಂತೆ ಒಂದು ಕೋಮಿನವರು ಪಟ್ಟು ಹಿಡಿದಿದ್ದು ಈ ಕುರಿತಂತೆ ಎರಡು ಸಮುದಾಯದ ಮುಖಂಡರ ಪರಸ್ಪರ ರಾಜಿಗಾಗಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News