×
Ad

ಉಡುಪಿ ಜಿಪಂಗೆ ಅವಿರೋಧ ಆಯ್ಕೆ: ಅಧ್ಯಕ್ಷರಾಗಿ ದಿನಕರ, ಉಪಾಧ್ಯಕ್ಷರಾಗಿ ಶೀಲಾ ಶೆಟ್ಟಿ

Update: 2016-04-27 23:47 IST

ಉಡುಪಿ, ಎ.27: ಉಡುಪಿ ಜಿಪಂನ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ನಿರೀಕ್ಷೆಯಂತೆ ಉದ್ಯಾವರ ಕ್ಷೇತ್ರದ ದಿನಕರ ಹಾಗೂ ಬ್ರಹ್ಮಾವರ ಕ್ಷೇತ್ರದ ಶೀಲಾ ಕೆ.ಶೆಟ್ಟಿ ಇಂದು ಅವಿರೋಧವಾಗಿ ಆಯ್ಕೆ ಯಾದರು. ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಜಿಪಂ ಸಭಾಂಗಣದಲ್ಲಿ ಇಂದು ಅಪರಾಹ್ನ ಈ ಆಯ್ಕೆ ನಡೆಯಿತು.

26 ಸದಸ್ಯರ ಉಡುಪಿ ಜಿಪಂನಲ್ಲಿ ಬಿಜೆಪಿ 20 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಹೊಂದಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬಿಜೆಪಿ ತನ್ನಿಬ್ಬರು ಅಭ್ಯರ್ಥಿಗಳ ಹೆಸರುಗಳನ್ನು ಎರಡು ದಿನ ಮೊದಲೇ ಪ್ರಕಟಿಸುವ ಮೂಲಕ ಚುನಾವಣೆ ವೇಳೆ ಯಾವುದೇ ಗೊಂದಲವಾಗದಂತೆ ನೋಡಿಕೊಂಡಿತ್ತು.

ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಎ.ಎಂ.ಕುಂಜಪ್ಪ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಗಾಯತ್ರಿ ಸಹಾಯಕ ಚುನಾವಣಾಧಿಕಾರಿಯಾಗಿದ್ದರು. ಚುನಾವಣಾ ಪ್ರಕ್ರಿಯೆ ನಡೆಯುವ ವೇಳೆ ಉಡುಪಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು.

ಬೆಳಗ್ಗೆ 9:30ರಿಂದ 11 ಗಂಟೆಯವರೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಯಿತು. ಆ ವೇಳೆ ಅಧ್ಯಕ್ಷ ಸ್ಥಾನಕ್ಕೆ ದಿನಕರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶೀಲಾ ಕೆ.ಶೆಟ್ಟಿ ಮಾತ್ರ ನಾಮಪತ್ರ ಸಲ್ಲಿಸಿದರು. ದಿನಕರ ಅವರಿಗೆ ಹಿರಿಯ ಸದಸ್ಯ ಕೆ.ಬಾಬು ಶೆಟ್ಟಿ ಸೂಚಕರಾದರೆ, ಶೀಲಾ ಶೆಟ್ಟಿ ಅವರಿಗೆ ರೇಶ್ಮಾ ಉದಯ ಶೆಟ್ಟಿ ಸೂಚಕರಾಗಿದ್ದರು.

ಅಪರಾಹ್ನ 1 ಗಂಟೆಗೆ ಚುನಾವಣಾಧಿಕಾರಿಗಳು ದಿನಕರ ಹಾಗೂ ಶೀಲಾ ಕೆ. ಶೆಟ್ಟಿ ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಮುಂದಿನ 5 ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಬಳಿಕ ಅಲ್ಲೇ ನಡೆದ ಅಭಿನಂದನಾ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕೆ.ಬಾಬು ಶೆಟ್ಟಿ, ಕಾಂಗ್ರೆಸ್ ಪಕ್ಷದ ಜನಾರ್ದನ ತೋನ್ಸೆ, ರೇಶ್ಮಾ ಉದಯ ಶೆಟ್ಟಿ, ಉದಯ ಕೋಟ್ಯಾನ್ ಹಾಗೂ ಉದಯಕುಮಾರ್ ಶೆಟ್ಟಿ ಮಾತನಾಡಿದರು.

ಸಮಾರಂಭದಲ್ಲಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಶ್ಯಾಮಲಾ ಕುಂದರ್, ಉದಯಕುಮಾರ್ ಶೆಟ್ಟಿ, ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.

ಅಧ್ಯಕ್ಷ ದಿನಕರ

ಉಡುಪಿ ಜಿಪಂನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ 38ರ ಹರೆಯದ ದಿನಕರ ಮೊನ್ನೆ ಮೊನ್ನೆಯವರೆಗೆ ಜಿಪಂನಲ್ಲಿ ಯೋಜನಾಧಿಕಾರಿಯವರ ಬಳಿ ಗುತ್ತಿಗೆ ಚಾಲಕ ರಾಗಿ ದುಡಿಯುತ್ತಿದ್ದರು. ಇದೀಗ ಮುಂದಿನ ಐದು ವರ್ಷಗಳಿಗೆ ಸಚಿವರ ದರ್ಜೆಯೊಂದಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕುತ್ಪಾಡಿ ಕಟ್ಟೆಗುಡ್ಡೆ ನಿವಾಸಿ ದಿನಕರ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದು, ಆ ಬಳಿಕ ಕೂಲಿ ಕೆಲಸ, ಕ್ರೀಡಾ ಇಲಾಖೆಯಲ್ಲಿ ನೈಟ್‌ವಾಚ್‌ಮನ್ ಆಗಿ 10 ವರ್ಷ ದುಡಿದು ಬಳಿಕ ಜಿಪಂನಲ್ಲಿ ಕಾರು ಚಾಲಕರಾಗಿ ನಾಲ್ಕು ವರ್ಷ ದುಡಿದಿದ್ದರು. ಪ್ರಜಾ ಪ್ರಭುತ್ವ ದಲ್ಲಿ ಎಲ್ಲರೂ ಸಮಾನರು ಎಂಬುದನ್ನು ತನ್ನ ಆಯ್ಕೆ ನಿರೂಪಿಸಿದೆ ಎಂದವರು ನುಡಿದರು.

ಇದೇ ಮೊದಲ ಬಾರಿ ಚುನಾವಣೆಯನ್ನು ಎದುರಿಸಿ ರಾಜಕೀಯಕ್ಕಿಳಿದಿರುವ ದಿನಕರ್, 22 ವರ್ಷಗಳಿಂದ ಬಿಜೆಪಿ ಪಕ್ಷದ ಸದಸ್ಯರು. ಪಕ್ಷದಲ್ಲಿ ಅವರು ಎಸ್ಸಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿದ್ದಾರೆ.

ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ

ಬಿಜೆಪಿಯ ಹಿರಿಯ ಸದಸ್ಯೆ 68 ವರ್ಷದ ಶೀಲಾ ಕೆ.ಶೆಟ್ಟಿ ಜಿಪಂ ಚುನಾವಣೆಯಲ್ಲಿ ಮೂರು ಬಾರಿ ಸೋತ ಬಳಿಕ ಈ ಬಾರಿ ಬ್ರಹ್ಮಾವರ ಕ್ಷೇತ್ರದಿಂದ ಸ್ಪರ್ಧಿಸಿ ಅಚ್ಚರಿಯ ಜಯ ಗಳಿಸಿದ್ದರು. ಮೂರು ದಶಕಗಳಿಗೂ ಅಧಿಕ ಸಮಯದಿಂದ ಬಿಜೆಪಿ ಪಕ್ಷದಲ್ಲಿ ದುಡಿಯುತ್ತಿರುವ ಶೀಲಾ ಪಕ್ಷದ ಸಕ್ರಿಯ ಸದಸ್ಯರಲ್ಲಿ ಒಬ್ಬರು. ಮೂಲತಃ ಎರ್ಮಾಳಿನವರಾದ ಶೀಲಾ ಕೆ.ಶೆಟ್ಟಿ ಕಾಪುವಿನಲ್ಲಿ ಎರಡು ಬಾರಿ ಹಾಗೂ ಪಡುಬಿದ್ರೆಯಲ್ಲಿ ಒಮ್ಮೆ ಸ್ಪರ್ಧಿಸಿ ಸೋತ ಬಳಿಕ ಈ ಬಾರಿ ಬ್ರಹ್ಮಾವರದಲ್ಲಿ ಸ್ಪರ್ಧಿಸಿ ಜಯಭೇರಿ ಬಾರಿಸಿದರು.

ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯೆ, ಪರಿಷತ್ ಸದಸ್ಯೆ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ, ಒಟ್ಟು ಐದು ಬಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ತೆಂಗುನಾರು ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ತುಳು-ಕನ್ನಡದಲ್ಲಿ ನಾಟಕ, ಕಥೆ, ಕಾದಂಬರಿ ಸೇರಿದಂತೆ 10 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಎರ್ಮಾಳಿನ ಶ್ರೀನಿಧಿ ಮಹಿಳಾ ಯಕ್ಷಕಲಾ ರಂಗ ಎಂಬ ಮಹಿಳಾ ಯಕ್ಷಗಾನ ಸಂಘವನ್ನು ಹುಟ್ಟುಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News