×
Ad

ರೈತರ ಸಭಾಭವನ, ಪ್ರವೇಶ ದ್ವಾರ ಜೂನ್ ಪ್ರಥಮ ವಾರದಲ್ಲಿ ಉದ್ಘಾಟನೆ- ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯ

Update: 2016-04-28 15:37 IST

ಪುತ್ತೂರು, ಎ. 28: ಎಪಿಎಂಸಿ ಪ್ರಾಂಗಣದಲ್ಲಿ ರೈತರಿಗಾಗಿ ನಿರ್ಮಾಣಗೊಂಡ ಸಭಾಭವನದ ಕಾಮಾಗಾರಿ ಶೇ.90ರಷ್ಟು ಪೂರ್ಣಗೊಂಡಿದ್ದು, ಜೊತೆಗೆ ಎಪಿಎಂಸಿ ಪ್ರವೇಶ ದ್ವಾರ, ಪ್ರಾಂಗಣಕ್ಕೆ ಡಾಮರೀಕರಣ ಪೂರ್ಣಗೊಂಡಿದೆ.

ಒಟ್ಟು ರೂ. 2.5 ಕೋಟಿ ವೆಚ್ಚದ ಈ ಕಾಮಗಾರಿಯನ್ನು ಎಪಿಎಂಸಿ ಸಚಿವರು ಉದ್ಘಾಟಿಸಬೇಕೆಂಬ ನಿಟ್ಟಿನಲ್ಲಿ ಜೂನ್ ತಿಂಗಳ ಪ್ರಥಮ ವಾರದಲ್ಲಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಹೇಳಿದರು.

ಎಪಿಎಂಸಿ ಸಾಮಾನ್ಯ ಸಭೆಯು ಗುರುವಾರ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ರೈತರಿಗಾಗಿ ನಿರ್ಮಾಣಗೊಂಡ ರೈತ ಭವನದಲ್ಲಿ ಬಾಕಿ ಇದ್ದ ವಿದ್ಯುತ್ ಸಂಬಂಧಿತ ಕಾಮಗಾರಿಗಳು ಮುಗಿದಿದೆ. ರೈತಭವನಕ್ಕೆ ಕಾಂಕ್ರೀಟ್ ರಸ್ತೆಯೂ ಆಗಿದೆ. ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಎಪಿಎಂಸಿ ಪ್ರವೇಶ ದ್ವಾರದ ಕಾಮಗಾರಿಯೂ ಮುಗಿದ್ದಿದ್ದು ಅದಕ್ಕೆ ಸ್ಟೀಲ್ ನೇಮ್‌ಪ್ಲೇಟ್ ಹಾಕುವ ಕೆಲಸ ನಡೆಯಲಿದ್ದು ಮುಂಭಾಗದ ಪ್ರವೇಶದ್ವಾರದ ಎದುರುಗಡೆಯ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಬೇಕಾಗಿದೆ.

ಎಪಿಎಂಸಿ ಪ್ರಾಂಗಣದ ಒಳಗೆ ಡಾಮರೀಕರಣ ಮಾಡಲಾಗಿದೆ. ಇವೆಲ್ಲದರ ಉದ್ಘಾಟನ ಕಾರ್ಯಕ್ರಮಕ್ಕಾಗಿ ಸಭೆಯಲ್ಲಿ ಅಧ್ಯಕ್ಷರು ಪ್ರಸ್ತಾಪ ಮಾಡಿದರು. ಉದ್ಘಾಟನಾ ಕಾರ್ಯಕ್ರಮಕ್ಕೆ ಎಪಿಎಂಸಿ ಸಚಿವರನ್ನು ಆಹ್ವಾನಿಸುವ ಕುರಿತು ಶಾಸಕರ ಮೂಲಕ ಮಾತುಕತೆ ನಡೆಸುವ ಎಂದು ನಾಮನಿರ್ದೇಶಿತ ಸದಸ್ಯ ಮಹೇಶ್ ರೈ ಅಂಕೋತಿಮಾರ್ ಹೇಳಿದರಲ್ಲದೆ ಎಲ್ಲವೂ ಪ್ರೋಟೋಕಾಲ್ ಪ್ರಕಾರವೇ ನಡೆಯಲಿ ಎಂದರು.

ಜಿಲ್ಲಾಡಳಿತಲ್ಲಿ ಪ್ರಟೋಕಾಲ್ ಕುರಿತು ಮಾಹಿತಿ ಇದೆ. ಅವರ ಮಾರ್ಗದರ್ಶನಂತೆ ಆಮಂತ್ರಣ ತಯಾರಿಸುವ ಆದರೆ ಸಚಿವರಲ್ಲಿ ಮೊದಲು ಸಮಯ ಕೇಳಬೇಕು ಎಂದು ಹೇಳಿದ ಅಧ್ಯಕ್ಷರು ರೈತರ ಸಭಾಭವನಕ್ಕೆ ಆಸನಗಳ ವ್ಯವಸ್ಥೆ ಆಗಬೇಕಾಗಿದೆ ಎಂದರು.

2015-16ನೆ ಸಾಲಿನ ಆದಾಯದ ಮೇಲೆ ಶೇ.10 ರಷ್ಟು ಮೊತ್ತವನ್ನು ಅಡಮಾನ ಸಾಲ ಉಳಿತಾಯ ಖಾತೆಗೆ ವರ್ಗಾಯಿಸುವ, ಅಡಮಾನ ಸಾಲ ಹುಟ್ಟುವಳಿಗಳ ಇನ್ಸೂರೆನ್ಸ್‌ನ್ನು ಮುಂದಿನ ಒಂದು ವರ್ಷದ ಅವಧಿಗೆ ನವೀಕರಿಸುವ ಹಾಗೂ ಕಚೇರಿ ಉಪಯೋಗಕ್ಕೆ 10.ಕೆ.ವಿ. ಜನರೇಟರ್ ಖರೀದಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಉಪಾಧ್ಯಕ್ಷ ಕರುಣಾಕರ ಎಲಿಯ, ನಿರ್ದೇಶಕರಾದ ಪಿ.ಸೀತಾರಾಮ ಗೌಡ, ಗುರುನಾಥ ಗೌಡ ಪಿ ಯನ್, ಯಶೋಧರ ಕೆ. ಗೌಡ, ಪ್ರಮೋದ್ ಕೆ.ಎಸ್, ತ್ರಿವೇಣಿ ಕರುಣಾಕರ ಪೆರ್ವೋಡಿ, ಡಿ.ಸೋಮನಾಥ, ಅಬ್ದುಲ್ ಶಕೂರ್ ವಿ.ಹೆಚ್, ನಾಮನಿರ್ದೇಶಿತ ಸದಸ್ಯ ಎ.ಮಾಣಿಕ್ಯರಾಜ್ ಪಡಿವಾಳ್, ಮಹೇಶ್ ರೈ ಅಂಕೋತ್ತಿಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು.

ಲೆಕ್ಕಾಧಿಕಾರಿ ರಾಮಚಂದ್ರರವರು ಸಭೆ ನಡಾವಳಿ ಓದಿದರು. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಹೆಚ್.ಕೆ.ಕೃಷ್ಣ ಮೂರ್ತಿ ಮಾಹಿತಿ ನೀಡಿದರು. ಸಭೆ ಮುಗಿದ ಬಳಿಕ ಕಾಮಗಾರಿ ಪೂರ್ಣಗೊಂಡ ನೂತನ ರೈತ ಸಭಾವನವನ್ನು ಸದಸ್ಯರು ಪರಿಶೀಲಿಸಿರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News