×
Ad

ರಂಗಮನೆಯಲ್ಲಿ ಯಕ್ಷ ಶಿಕ್ಷಣ ಕಾರ್ಯಾಗಾರ ಸಮಾರೋಪ

Update: 2016-04-28 15:43 IST

ಸುಳ್ಯ, ಎ. 28: ಸುಳ್ಯದ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ರಂಗಮನೆಯಲ್ಲಿ 10 ದಿನಗಳ ಕಾಲ ನಡೆದ ಯಕ್ಷ ಶಿಕ್ಷಣ ಕಾರ್ಯಾಗಾರ ಸಂಪನ್ನಗೊಂಡಿದೆ.

ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ರತ್ನಾಕರ ಮಲ್ಲಮೂಲೆ ಸಮಾರೋಪ ಭಾಷಣ ಮಾಡಿದರು.

ಜಾಗತೀಕರಣ, ನಗರೀಕರಣದ ಈ ವೇಗದ ಬದುಕಿನಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನದನ್ನು ಸಾಧಿಸಬೇಕು ಎಂಬುದು ಎಲ್ಲರ ಬಯಕೆ. ವೇಗದ ಬದುಕಿನಲ್ಲಿ ಮೌಲ್ಯಕ್ಕೆ ಬೆಲೆಯನ್ನೇ ಕೊಡುವುದಿಲ್ಲ. ಎಲ್ಲೆಲ್ಲ ಅವಕಾಶಗಳಿವೆಯೋ ಅಲ್ಲಿಗೆಲ್ಲ ಮಕ್ಕಳನ್ನು ಕಳುಹಿಸಿ ತರಬೇತಿ ನೀಡುತ್ತಾರೆ. ಇದರಿಂದ ಮಕ್ಕಳು ಎಲ್ಲಿಯೂ ಪರಿಪೂರ್ಣ ಆಗುವುದಿಲ್ಲ. ಯಕ್ಷಗಾನದಲ್ಲಿ ಕರಾರುವಕ್ಕಾದ ನಾಟ್ಯ ಆದರೆ ಮಾತ್ರ ಅದು ಪರಿಪೂರ್ಣ ಎಂದ ಅವರು. ಕನ್ನಡ ರಂಗಭೂಮಿ, ಭಾಷೆ, ಸಾಹಿತ್ಯ ಬೆಳವಣಿಗೆಗೆ ಯಕ್ಷಗಾನದ ಕೊಡುಗೆ ಬಹು ದೊಡ್ಡದು. ಯಕ್ಷಗಾನ ಕವಿಗಳು ಚರಿತ್ರೆಯನ್ನು ಮತ್ತಷ್ಟು ಸರಳೀಕರಣಗೊಳಿಸಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾವತಿ ಬಾಳಿಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕವಿ, ಯಕ್ಷಗಾನ ಕಲಾವಿದ ಕೃ.ಶಾ. ಮರ್ಕಂಜ ಅತಿಥಿಯಾಗಿದ್ದರು. ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ, ಸುಜನಾ ಯಕ್ಷಗಾನ ಕೇಂದ್ರದ ಯಕ್ಷಗುರುಗಳಾದ ಸಬ್ಬಣಕೋಡಿ ರಾಮ ಭಟ್, ಕುಮಾರ ಸುಬ್ರಹ್ಮಣ್ಯ, ವೆಂಕಟ್ರಾಮ ಭಟ್, ಸುಜನಾ ಸುಳ್ಯ, ರಂಗಮನೆಯ ಅಧ್ಯಕ್ಷ ಜೀವನ್‌ರಾಂ ಸುಳ್ಯ, ಕೇಂದ್ರದ ಸಂಚಾಲಕ ಡಾ.ಸುಂರ್ ಕೇನಾಜೆ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News