ಪುತ್ತೂರು: ಅಕಾಲದಲ್ಲಿ ಜಿಲ್ಲೆಗೆ ಕಾಲಿಟ್ಟ ’ಡೆಂಗ್ಯು’
ಪುತ್ತೂರು: ಮಳೆಯಿಲ್ಲದೆ ಕುಡಿಯುವ ನೀರಿಗೂ ತತ್ವಾರವಾಗಿ ಜನತೆ ಕಂಗಾಲಾಗಿರುವುದು ಒಂದೆಡೆಯಾದರೆ, ಬಿಸಿಲ ಧಗೆಗೆ ಕಂಗೆಟ್ಟ ಜನರು ಹುಯ್ಯೋ ಹುಯ್ಯೋ ಮಳೆರಾಯ ಎಂದು ಕಾಯುತ್ತಿದ್ದಾರೆ. ಇನ್ನೊಂದೆಡೆ ಮಳೆಗಾಲದಲ್ಲಿ ಜನತೆಯನ್ನು ಕಾಡುತ್ತಿದ್ದ ’ಡೆಂಗ್ಯು’ ಜ್ವರ ಅಕಾಲವಾಗಿ ಇದೀಗ ಪುತ್ತೂರು ತಾಲೂಕಿನ ವಿವಿಧ ಭಾಗಗಳು ಸೇರಿಂದತೆ ಜಿಲ್ಲೆಯಲ್ಲಿ ತೀವ್ರವಾಗಿ ಹರಡುತ್ತಿದೆ. ಈಗಾಗಲೇ ಹಲವಾರು ಮಂದಿ ಡೆಂಗ್ಯು ಜ್ವರದ ಬಾಧೆಗೆ ಸಿಲುಕಿ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಾನ್ಯವಾಗಿ ಡೆಂಗ್ಯು ಜ್ವರ ಮುಂಗಾರು ಮಳೆಯ ನಂತರದ ದಿನಗಳಲ್ಲಿ ಜನತೆಯನ್ನು ಪೀಡಿಸುತ್ತಿತ್ತು. ಮಳೆಯ ನೀರು ನಿಂತು ಅದರಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಮೂಲಕ ಈ ಜ್ವರ ವ್ಯಾಪಿಸುತ್ತಿತ್ತು. ನಿರಂತರ ಮಳೆ ಸುರಿಯಲಾರಂಭಿಸಿದರೆ ಡೆಂಗ್ಯು ಬಾಧೆ ಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ತದ್ವಿರುದ್ಧ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಗ್ರಾಮೀಣ ಭಾಗದ ಹಲವಾರು ಕಡೆಗಳಲ್ಲಿ ಡೆಂಗ್ಯೂ ಕಂಡು ಬಂದಿದೆ. ಕಡಬ ಹೋಬಳಿಯ ಆಲಂಕಾರು, ಚಾರ್ವಾಕ, ಕಾಣಿಯೂರು ಹಾಗೂ ಸವಣೂರು ಭಾಗಗಳಲ್ಲಿ ಡೆಂಗ್ಯು ತನ್ನ ಪ್ರಭಾವ ತೋರಿಸಲಾಂಭಿಸಿದೆ. ಹಲವಾರು ಮಂದಿ ಈ ಜ್ವರದ ಬಾಧೆಯಿಂದ ನರಳುವಂತಾಗಿದೆ. ಬಿಸಿಲಿನ ಝಳಕ್ಕೆ ಕಂಗೆಟ್ಟ ಮಂದಿಗೆ ಜ್ವರದ ಬಾಧೆ ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ.
ಕಳೆದ 7-8 ವರ್ಷಗಳಿಂದ ನಿರಂತರವಾಗಿ ದಕ್ಷಿಣಕನ್ನಡದಲ್ಲಿ ಡೆಂಗ್ಯು ಜ್ವರ ಜನತೆಯನ್ನು ಕಾಡುತ್ತಲೇ ಇದೆ. ಇದರೊಂದಿಗೆ ಮಲೇರಿಯಾ, ಇಲಿ ಜ್ವರ, ಕಾಮಾಲೆ ರೋಗ, ಚಿಕುನ್ ಗುನ್ಯಾ ಹೀಗೆ ಒಂದಲ್ಲ ಒಂದು ರೋಗಬಾಧೆಗೆ ಜನತೆ ನಿರಂತರವಾಗಿ ಒಳಗಾಗುತ್ತಲೇ ಇದ್ದಾರೆ. ಸಾಮಾನ್ಯವಾಗಿ ಈ ಜ್ವರಗಳು ಪ್ರಾರಂಭವಾಗಲು ಅವಧಿಯೂ ಇದೆ. ಆದರೆ ಈ ಬಾರಿ ಡೆಂಗ್ಯು ಜ್ವರ ತನ್ನ ಅವಧಿಗೆ ಮುನ್ನ ಪ್ರಾರಂಭಗೊಂಡಿದೆ. ಆರೋಗ್ಯ ಇಲಾಖೆ ಜನತೆಯನ್ನು ಜಾಗೃತಿ ಗೊಳಿಸುವ ಮೊದಲೇ ಜ್ವರದ ತೀವ್ರತೆ ಹೆಚ್ಚಾಗಿದೆ. ಇಂತಹ ಉರಿಬಿಸಿಲ ಕಾಲದಲ್ಲಿ ಈ ಹಿಂದೆ ಇಷ್ಟೊಂದು ಪ್ರಮಾಣದಲ್ಲಿ ಈ ಹಿಂದೆ ಕಂಡುಬಂದಿರಲಿಲ್ಲ.
ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಡೆಂಗ್ಯು ರೋಗವನ್ನು ಪತ್ತೆ ಹಚ್ಚುವ ಯಾವುದೇ ಆಧುನಿಕ ಯಂತ್ರಗಳಿಲ್ಲ. ರಕ್ತದ ಸ್ಯಾಂಪಲ್ ಗಳನ್ನು ಜಿಲ್ಲೆಗೆ ಕಳುಹಿಸಬೇಕಾಗುತ್ತದೆ. ಅಲ್ಲಿಂದ ಸಮರ್ಪಕ ಮಾಹಿತಿ ಬರಲು ತಡವಾದ ಕಾರಣ ಇಲ್ಲಿ ರೋಗವನ್ನು ತಡೆಯುವಲ್ಲಿ ವಿಳಂಬವಾಗುತ್ತಿದೆ ಎಂಬುದು ಸಾರ್ವಜನಿಕರ ದೂರು.
ಆರೋಗ್ಯ ಇಲಾಖೆಯ ಪ್ರಕಾರ ಡೆಂಗ್ಯು ಇಷ್ಟು ಬೇಗ ಆರಂಭವಾಗಲು ತೋಟಗಳಿಗೆ ತಡೆ ರಹಿತವಾಗಿ ನೀರು ಹಾಕುವುದು ಕಾರಣವಾಗಿದೆ. ಸಾಮಾನ್ಯವಾಗಿ ಎರಡು ಗಂಟೆ ನೀರು ಹಾಯಿಸಿದರೆ ಅಡಿಕೆ ತೋಟಕ್ಕೆ ಸಾಕಾಗುತ್ತದೆ. ಆದರೆ ಕೆಲವು ಭಾಗಗಳಲ್ಲಿ ರಾತ್ರಿ ಹೊತ್ತು ನಿರಂತರವಾಗಿ ನೀರು ಹಾಯಿಸುವುದರಿಂದ ಅಡಿಕೆ ಹಾಳೆ, ಸೀಯಾಳ ಕುಡಿದು ಬೀಸಾಡಿದ ಗೆರಟೆಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿದ್ದು, ಡೆಂಗ್ಯು ಜ್ವರಕ್ಕೆ ಕಾರಣವಾಗುತ್ತಿದೆ. ತೋಟಗಳಲ್ಲಿ ನೀರು ಆವಿಯಾಗುವಷ್ಟು ಅವಕಾಶವನ್ನು ನೀಡಿ ಆಮೇಲೆ ನೀರು ಹಾಯಿಸಿದರೆ ಈ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.
ಅವಧಿಗೂ ಮೊದಲೇ ಡೆಂಗ್ಯು ಜ್ವರ ತಾಲೂಕಿಗೆ ಕಾಲಿಟ್ಟಿದೆ. ಆರೋಗ್ಯ ಇಲಾಖೆಯ ಚಟುವಟಿಕೆ ತೀವ್ರಗೊಳ್ಳಬೇಕಾಗಿದೆ. ತಾಲೂಕಿನಲ್ಲಿ ಡೆಂಗ್ಯು ಜ್ವರಕ್ಕೆ ಬಲಿಯಾದವರ ಸಂಖ್ಯೆ ಬಹಳ ಕಡಿಮೆ ಎಂಬುವುದು ನಿಜವಾದರೂ ಎಚ್ಚರ ವಹಿಸುವುದು ಜನತೆಯ ಹಾಗೂ ಆರೋಗ್ಯ ಇಲಾಖೆಯ ಜವಾಬ್ದಾರಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಡೆಂಗೆ ಜ್ವರ ತೀವ್ರಗೊಳ್ಳುತ್ತಿರುವುದು ನಿಜ. ಜಿಲ್ಲೆಯಲ್ಲಿ 100ಕ್ಕೂ ಮಂದಿ ಶಂಕಿತ ಡೆಂಗ್ಯು ಶಂಕಿತರಿದ್ದಾರೆ. ಇದರಲ್ಲಿ 46 ಮಂದಿಗೆ ಡೆಂಗ್ಯು ಇರುವುದು ಸ್ಪಷ್ಟಗೊಂಡಿದೆ. ಹೆಚ್ಚು ತಂಪು ಪಾನೀಯಗಳಿಂದ ಕೆಲವು ಜ್ವರ ಬರುತ್ತಿದೆ. ಪ್ರಸ್ತುತ ಡೆಂಗ್ಯು ಹರಡುತ್ತಿರುವುದು ತೋಟಗಳಿಂದ ಎಂಬುವುದು ಸಾಬೀತಾಗಿದೆ. ತೋಟಗಳಲ್ಲಿ ತೆಂಗಿ ಗೆರಟೆ, ಕೊಕ್ಕೋ ಚಿಪ್ಪು, ಅಡಿಕೆ ಹಾಳೆಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಇದನ್ನು ತಡೆಯಲು ಕಷ್ಟ. ಆದರೂ ಜನತೆಯನ್ನು ಜಾಗೃತಿಗೊಳಿಸುವ ಕೆಲಸ ಇಲಾಖೆಯಿಂದ ನಡೆಯುತ್ತಿದೆ.
-ಡಾ. ಅರುಣ್ ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣ ಅಧಿಕಾರಿ