ಭೂಸಂತ್ರಸ್ತರ ಪರಿಹಾರ ನೀಡುವಲ್ಲಿ ವಿಳಂಬ: ಎ.ಸಿ ಕಚೇರಿ ಆಸ್ತಿ ಮುಟ್ಟುಗೋಲು
ಮಂಗಳೂರು, ಎ.28: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ಮಾಡಿದ ಎ ಸಿ ಕಚೇರಿ ನ್ಯಾಯಾಲಯದ ಆದೇಶದಂತೆ ಪರಿಹಾರದ ಹಣ ನಿಡಲು ವಿಫಲವಾಗಿರುವುದರಿಂದ ನ್ಯಾಯಾಲಯವು ಇಂದು ಮಂಗಳೂರಿನ ಮಿನಿವಿಧಾನಸೌಧದಲ್ಲಿರುವ ಎ ಸಿ ಕಚೇರಿಯ ಸಾಮಾಗ್ರಿಗಳನ್ನು ಮುಟ್ಟುಗೋಲು ಹಾಕಿತು.
ಮಿನಿವಿಧಾನಸೌಧದಲ್ಲಿರುವ ಎ.ಸಿ ಕಚೇರಿಯನ್ನು ನ್ಯಾಯಾಲಯದ ಅನುಷ್ಠಾನ ಅಧಿಕಾರಿಗಳಾದ ಭಾನುಮತಿ ಮತ್ತು ದೇವರಾಜ್ ಪಾಂಡೇಶ್ವರ ಪೊಲೀಸರ ಸಹಕಾರದೊಂದಿಗೆ ಸಂತ್ರಸ್ತರ ಸಮ್ಮುಖದಲ್ಲಿ ಮುಟ್ಟುಗೋಲು ಹಾಕಿದರು. ಎಸಿ ಕಚೇರಿಯಲ್ಲಿರುವ ಕಂಪ್ಯೂಟರ್ , ಟೇಬಲ್, ಫ್ಯಾನ್ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಮುಟ್ಟುಗೋಲು ಹಾಕಲಾಯಿತು.
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಹಲವರ ಭೂಮಿಯನ್ನು ಸ್ವಾಧೀನಪಡಿಸಲಾಗಿತ್ತು. ಇದರಲ್ಲಿ ಭೂಮಿಯನ್ನು ಕಳೆದುಕೊಂಡ ಕೆಂಜಾರುಪದವಿನ ಚಂದ್ರಶೇಖರ್ ಮತ್ತು ಡೊಂಬ ಎಂಬವರು ತಮಗೆ ತೀರಾ ತಮ್ಮ ಭೂಮಿಗೆ ಕಡಿಮೆ ಪರಿಹಾರವನ್ನು ನೀಡಲಾಗಿದೆ. ಸೆಂಟ್ಸ್‌ವೊಂದಕ್ಕೆ ಕೇವಲ ಒಂದು ಸಾವಿರದ ಐನೂರು ಮಾತ್ರ ನೀಡಲಾಗಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಚಂದ್ರ ಶೇಖರ್ ಮತ್ತು ಡೊಂಬ ಅವರು ವಿಮಾನ ನಿಲ್ದಾಣಕ್ಕಾಗಿ ತಲಾ ಅರ್ಧ ಎಕರೆ ಭೂಮಿಯನ್ನು ನೀಡಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯ 2014 ರ ಡಿಸೆಂಬರ್ ನಲ್ಲಿ ಸಂತ್ರಸ್ತರಿಬ್ಬರಿಗೆ ಸೆಂಟ್ಸ್‌ಗೆ ಹತ್ತು ಸಾವಿರ ರೂಪಾಯಿಯಂತೆ ಭೂಮಿಗೆ ಬೆಲೆ ನಿಗದಿಪಡಿಸಿ ಅದರ ವೌಲ್ಯವನ್ನು ನೀಡಬೇಕು ಎಂದು ಮಂಗಳೂರು ಸಹಾಯಕ ಕಮೀಷನರ್ ಡಾ.ಡಿ.ಆರ್.ಅಶೋಕ್ ಅವರಿಗೆ ಸೂಚಿಸಿತ್ತು. ಆದರೆ 2 ವರ್ಷವಾದರೂ ಸಂತ್ರಸ್ತರಿಗೆ ಭೂಮಿಯ ವೌಲ್ಯವನ್ನು ನೀಡದ ಸಹಾಯಕ ಕಮೀಷನರ್ ಅವರಿಗೆ ನ್ಯಾಯಾಲಯ ಜ.25 ಕ್ಕೆ ನೋಟಿಸನ್ನು ಜಾರಿಗೊಳಿಸಿ ಭೂಮಿಯ ವೌಲ್ಯವನ್ನು ಪಾವತಿಸಲು ಆದೇಶಿಸಿತ್ತು.ಆದರೆ ಸಹಾಯಕ ಕಮೀಷನರ್ ಅವರು ಭೂಮಿಯ ವೌಲ್ಯವನ್ನು ನೀಡಲು ವಿಫಲವಾಗಿರುವುದರಿಂದ ಇಂದು ನ್ಯಾಯಾಲಯದ ಅಧಿಕಾರಿಗಳು ಮಂಗಳೂರಿನ ಮಿನಿವಿಧಾನಸೌಧದ ಎ ಸಿ ಕಚೇರಿಯನ್ನು ಮುಟ್ಟುಗೋಲು ಹಾಕಿದರು.
ವಿಮಾನನಿಲ್ದಾಣದ ಅಭಿವೃದ್ದಿಗೆ ಸರಕಾರ ಕೋಟ್ಯಾಂತರ ಖರ್ಚು ಮಾಡುತ್ತಿದೆ. ಆದರೆ ಭೂಮಿ ಕೊಟ್ಟವರಿಗೆ ಪರಿಹಾರ ನೀಡಲು ನಿರ್ಲಕ್ಷ ವಹಿಸುತ್ತಿದೆ. ಸರಕಾರ ಕೆವಲ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿರುವುದು, ಬಡವರ ಪರ ನಿರ್ಲಕ್ಷ ಮಾಡುತ್ತಿರುವುದು ಸರಿಯಲ್ಲ
- ಚಂದ್ರಶೇಖರ್, ಸಂತ್ರಸ್ತ
-------------