×
Ad

ಮಲ್ಯರನ್ನು ಗಡೀಪಾರುಗೊಳಿಸಿ ಬ್ರಿಟನ್‌ಗೆ ಭಾರತದ ಮನವಿ

Update: 2016-04-28 20:35 IST

ಹೊಸದಿಲ್ಲಿ,ಎ.28: ಬ್ಯಾಂಕುಗಳಿಗೆ 9,400 ಕೋ.ರೂ.ಗೂ ಅಧಿಕ ಸಾಲ ಬಾಕಿಯಿರಿಸಿ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯ ಅವರನ್ನು ಗಡೀಪಾರುಗೊಳಿಸುವಂತೆ ಭಾರತವು ಬ್ರಿಟನ್‌ಗೆ ಮನವಿ ಸಲ್ಲಿಸಿದೆ. ಅವರ ಪಾಸ್‌ಪೋರ್ಟ್ ರದ್ದುಗೊಳಿಸಿರುವುದನ್ನು ಮತ್ತು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿರುವುದನ್ನು ಅದು ಬ್ರಿಟನ್ ಸರಕಾರದ ಗಮನಕ್ಕೆ ತಂದಿದೆ.

ಮಲ್ಯ ಗಡೀಪಾರು ವಿಷಯದ ಕುರಿತು ಬ್ರಿಟನ್ ಅಧಿಕಾರಿಗಳೊಂದಿಗೆ ಮಾತುಕತೆಗಳನ್ನು ಮುಂದುವರಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಒತ್ತಿ ಹೇಳಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತಲು ಮಲ್ಯರನ್ನು ಗಡೀಪಾರುಗೊಳಿಸುವಂತೆ ಕೋರಿ ಸಚಿವಾಲಯವು ದಿಲ್ಲಿಯಲ್ಲಿನ ಬ್ರಿಟನ್ ರಾಯಭಾರಿ ಕಚೇರಿಗೆ ಪತ್ರ ಬರೆದಿದೆ. ಬ್ರಿಟನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೂ ಅಲ್ಲಿಯ ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿಗೆ ಇಂತಹುದೇ ಪತ್ರವನ್ನು ಸಲ್ಲಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ ಸ್ವರೂಪ್ ತಿಳಿಸಿದರು.

ಮಾ.2ರಂದು ಭಾರತವನ್ನು ತೊರೆದು ಬ್ರಿಟನ್‌ಗೆ ಹಾರಿರುವ ಮಲ್ಯ ಆ ರಾಷ್ಟ್ರದಲ್ಲಿ ತನ್ನ ವಾಸವನ್ನು ಮುಂದುವರಿಸಲು ಅನುಮತಿ ನೀಡುವಂತೆ ಬ್ರಿಟಿಷ್ ಅಧಿಕಾರಿಗಳನ್ನು ಕೋರಬಹುದು ಅಥವಾ ತನ್ನ ಪಾಸ್‌ಪೋರ್ಟ್ ರದ್ದುಗೊಳಿಸಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News