25 ಜೆಎನ್‌ಯು ವಿದ್ಯಾರ್ಥಿಗಳಿಂದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ

Update: 2016-04-28 15:15 GMT

ಹೊಸದಿಲ್ಲಿ,ಎ.28: ಫೆ.9ರ ವಿವಾದಾತ್ಮಕ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ ಮತ್ತು ಇತರರಿಗೆ ವಿಧಿಸಲಾಗಿರುವ ದಂಡನೆಯನ್ನು ವಿರೋಧಿಸಿ ಜೆಎನ್‌ಯು ವಿದ್ಯಾರ್ಥಿಗಳ ಎರಡು ಗುಂಪುಗಳು ಅನಿರ್ದಿಷ್ಟಾವಧಿ ಉಪವಾಸ ಮುಷ್ಕರವನ್ನು ನಡೆಸುತ್ತಿವೆ.

ಐವರು ಪ್ರತಿಭಟನಾನಿರತ ವಿದ್ಯಾರ್ಥಿಗಳು ಎಬಿವಿಪಿಗೆ ಸೇರಿದ್ದರೆ, ಕನ್ಹಯ್ಯಾ ಒಳಗೊಂಡಂತೆ 20 ಇತರ ವಿದ್ಯಾರ್ಥಿಗಳು ವಿವಿಧ ಗುಂಪುಗಳಿಗೆ ಸೇರಿದವರಾಗಿದ್ದಾರೆ. ವಿದ್ಯಾರ್ಥಿಗಳು ಗಂಗಾ ಧಾಬಾದಿಂದ ಆಡಳಿತ ವಿಭಾಗದವರೆಗೆ ದೊಂದಿ ಬೆಳಕಿನ ಮೆರವಣಿಗೆ ನಡೆಸಿದ ಬಳಿಕ ಬುಧವಾರ ಮಧ್ಯರಾತ್ರಿಯಿಂದ ಉಪವಾಸ ಮುಷ್ಕರವು ಆರಂಭಗೊಂಡಿದೆ.

ಕನ್ಹಯ್ಯ,ಖಾಲಿದ್ ಉಮರ್ ಮತ್ತು ಅನಿರ್ಬಾಣ ಭಟ್ಟಾಚಾರ್ಯ ಸೇರಿದಂತೆ ವಿದ್ಯಾರ್ಥಿಗಳ ವಿರುದ್ಧ ಐವರು ಸದಸ್ಯರ ತನಿಖಾ ಸಮಿತಿಯ ಶಿಫಾರಸಿನ ಮೇರೆಗೆ ವಿವಿ ಆಡಳಿತವು ದಂಡನಾ ಕ್ರಮವನ್ನು ಘೋಷಿಸಿದೆ.

ಪರೀಕ್ಷೆಯ ಸಂದರ್ಭದಲ್ಲಿ ದಂಡನಾ ಕ್ರಮವನ್ನು ಕೈಗೊಂಡರೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗುವುದಿಲ್ಲ ಎಂದು ಆಡಳಿತವು ಭಾವಿಸಿದೆ. ನಮ್ಮ ಬುದ್ಧಿಮತ್ತೆಯನ್ನು ಪ್ರಶ್ನಿಸಬೇಡಿ. ಮುಷ್ಕರಕ್ಕೆ ಕುಳಿತು ಕೂಡ ನಾವು ನಮ್ಮ ಸಂಶೋಧನಾ ಪ್ರಬಂಧಗಳನ್ನು ಬರೆಯಬಲ್ಲೆವು ಮತ್ತು ಪರೀಕ್ಷೆಯಲ್ಲಿ ತೇರ್ಗಡೆಯಾಗಬಲ್ಲೆವು ಎಂದು ಸುದ್ದಿಗಾರರೊಡನೆ ಮಾತನಾಡಿದ ಕನ್ಹಯ್ಯೆ ಹೇಳಿದರು.

ಉನ್ನತ ಮಟ್ಟದ ತನಿಖಾ ಸಮಿತಿಯ ಈ ಉನ್ನತ ಮಟ್ಟದ ನಾಟಕವೇ ರೋಹಿತ ವೇಮುಲಾ ಆತ್ಮಹತ್ಯೆಯ ಹಿಂದಿನ ಕಾರಣವಾಗಿತ್ತು. ನಾವು ಪ್ರಾಣವನ್ನು ಕಳೆದುಕೊಳ್ಳಲು ಬಯಸುತ್ತಿಲ್ಲ. ನಾವು ಈ ಕಾರ್ಯಸೂಚಿಯ ವಿರುದ್ಧ ಹೋರಾಟವನ್ನು ನಡೆಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News