×
Ad

ಚೈಲ್ಡ್‌ಲೈನ್‌ನಿಂದ ‘ತೆರೆದ ಮನೆ’ ಕಾರ್ಯಕ್ರಮ

Update: 2016-04-28 23:47 IST

ಮಂಗಳೂರು, ಎ.28: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ ಚೈಲ್ಡ್ ಲೈನ್ -1098 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ತೆರೆದ ಮನೆ’ ಎಂಬ ಕಾರ್ಯಕ್ರಮ ಕಾವೂರು ಶಾಂತಿನಗರ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಜರಗಿತು. ಮಕ್ಕಳು ಚೈಲ್ಡ್‌ಲೈನ್‌ನ ಭಿತ್ತಿಪತ್ರವನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾವೂರು ಎಸ್ಸೈ ಉಮೇಶ್‌ಕುಮಾರ್ ಮಾತನಾಡಿ, ಅಪರಾಧಗಳು ನಡೆದಾಗ ಹಾಗೂ ಸಂಶಯಿತ ವ್ಯಕ್ತಿಗಳು ತಮ್ಮ ಪರಿಸರದಲ್ಲಿ ಕಂಡುಬಂದಾಗ ತಕ್ಷಣ ಜನಸಾಮಾನ್ಯರು ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಬೇಕು. ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ತಾಯಂದಿರುಗಳು ಎಚ್ಚರವಹಿಸಬೇಕು. ಮಕ್ಕಳಿಗೆ ಅಹಿತಕರ ಸ್ಪರ್ಶಗಳ ಬಗ್ಗೆ ತಿಳುವಳಿಕೆಯನ್ನು ನೀಡಬೇಕು, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿ ಯಾಗಿದ್ದು, ಸಮಸ್ಯೆಗಳು ಬಂದಾಗ ಮಕ್ಕಳು ಮಹಿಳೆಯರು ಭಯಮುಕ್ತರಾಗಿ ನೇರವಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಧ್ಯಾ, ಬಾಲಕಾರ್ಮಿಕ ಯೋಜನಾಧಿಕಾರಿ ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಜ್ಯೋತಿ ಕೆ. ಉಳೆಪಾಡಿ, ಚೈಲ್ಡ್‌ಲೈನ್ ಮಂಗಳೂರು -1098 ನಗರ ಸಂಯೋಜಕ ಯೋಗೀಶ್ ಮಲ್ಲಿಗೆಮಾಡು, ಶ್ರೀಧರ್, ಪೂರ್ಣಲತಾ, ಶೋಭಾ ಉಪಸ್ಥಿತರಿದ್ದರು. ಚೈಲ್ಡ್‌ಲೈನ್ ಮಂಗಳೂರು-1098 ಕೇಂದ್ರ ಸಂಯೋಜನಾಧಿಕಾರಿ ಸಂಪತ್ ಕಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪವಿತ್ರಾ ಜ್ಯೋತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಶಿಕ್ಷಕಿ ಸುಲೋಚನಾ ಸ್ವಾಗತಿಸಿದರು. ರೇವತಿ ಹೊಸಬೆಟ್ಟು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News