ಮಂಟಪ ಪ್ರಭಾಕರ ಉಪಾಧ್ಯರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’
Update: 2016-04-28 23:55 IST
ಉಡುಪಿ, ಎ.28: ಕರಾವಳಿಯ ಯಕ್ಷ ಕಲಾವಿದರ ಏಳಿಗೆ, ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗ ಈ ಕ್ಷೇತ್ರದ ಸಾಧಕರನ್ನು ಗುರುತಿಸಿ 20 ವಿಭಿನ್ನ ಪ್ರಶಸ್ತಿಗಳನ್ನು ಪ್ರತಿವರ್ಷ ನೀಡುತ್ತಿದ್ದು, ಈ ಬಾರಿಯ ‘ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ’ಗೆ ಪ್ರಸಿದ್ಧ ಯಕ್ಷಗಾನ ಸ್ತ್ರೀ ವೇಷಧಾರಿ ಮಂಟಪ ಪ್ರಭಾಕರ ಉಪಾಧ್ಯರನ್ನು ಆಯ್ಕೆ ಮಾಡಿದೆ.
ಮಂಟಪ ಪ್ರಭಾಕರ ಉದ್ಯಮಿಯಾಗಿ, ಯಕ್ಷಗಾನ ಪೋಷಕರಾಗಿ ಈ ಕಲಾಪ್ರಕಾರಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಮೇ 22ರಂದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಮಂಟಪರ ಕುರಿತು ದಿನಪೂರ್ತಿ ಕಾರ್ಯಕ್ರಮ, ವಿಚಾರ ಸಂಕಿರಣ, ಕಲಾ ಪ್ರದರ್ಶನ, ಉದ್ಘಾಟನಾ-ಸಮಾರೋಪ ಸಮಾರಂಭದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.