ಸಚಿವ ಖಾದರ್ ತಂದೆ-ತಾಯಿಯ ಗೋರಿಗಳಿಗೆ ಹಾನಿ

Update: 2016-04-29 16:12 GMT

ಮಂಗಳೂರು, ಎ.29: ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಉಂಟಾಗಿರುವ ಎರಡು ಬಣಗಳ ನಡುವಿನ ಜಟಾಪಟಿಯು ಇಂದು ತಾರಕಕ್ಕೇರಿದ್ದು, ಗುಂಪೊಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ತಂದೆ-ತಾಯಿಯ ಗೋರಿ (ಖಬರ್)ಗಳಿಗೆ ಹಾನಿಯನ್ನುಂಟು ಮಾಡುವ ಮೂಲಕ ಅನಾಗರಿಕತೆಯನ್ನು ಮೆರೆದಿದೆ.

ಮಸೀದಿ ಮತ್ತು ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷರ ಆಯ್ಕೆಯಲ್ಲಿ ರಾಜಕೀಯ ಪ್ರವೇಶ ಮಾಡಿದೆ ಎಂದು ಆರೋಪಿಸಿರುವ ಒಂದು ಬಣವು ಇಂದು ಮಧ್ಯಾಹ್ನ ಸುಮಾರು 12 ಗಂಟೆ ಹೊತ್ತಿಗೆ ಸಚಿವ ಖಾದರ್‌ರ ತಂದೆಯ ಖಬರ್‌ನ ಮೇಲಿನ ಟೈಲ್ಸ್‌ಗಳು ಹಾಗೂ ನಾಮಫಲಕವನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಅಲ್ಲೇ ಹತ್ತಿರದಲ್ಲಿದ್ದ ತಾಯಿಯ ಖಬರ್ ಮೇಲಿನ ಟೈಲ್ಸ್‌ಗೆ ಹಾನಿಗೊಳಿಸಿ, ಖಾದರ್ ವಿರುದ್ಧ ಘೋಷಣೆ ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಳೆದ ತಿಂಗಳಿಂದೀಚೆಗೆ ಮಸೀದಿ ಮತ್ತು ದರ್ಗಾ ಸಮಿತಿಯ ಅಧ್ಯಕ್ಷರ ಆಯ್ಕೆ ವಿಷಯಕ್ಕೆ ಸಂಬಂಧಿಸಿ ಎರಡೂ ಬಣಗಳು ಅಂತಿಮ ನಿರ್ಧಾರ ಕೈಗೊಳ್ಳದಿದ್ದರಿಂದ ಅಧ್ಯಕ್ಷರ ಆಯ್ಕೆ ವಿಷಯ ತಾರಕ್ಕಕ್ಕೇರಿತ್ತು. ಈ ಎರಡೂ ಬಣಗಳ ಅಸಮಾಧಾನ ನಿನ್ನೆ ಭುಗಿಲೆದ್ದು ಪರಸ್ಪರ ಆರೋಪ, ಪ್ರತ್ಯಾರೋಪಗಳು ನಡೆದಿದ್ದವು. ವಿಷಯ ತಾರಕ್ಕೇರುವುದನ್ನು ಅರಿತ ಪೊಲೀಸರು ಮತ್ತು ವಕ್ಫ್ ಅಧಿಕಾರಿಗಳು ಗುರುವಾರ ರಾತ್ರಿ ಆಗಮಿಸಿ ಅಧ್ಯಕ್ಷರ ಕಚೇರಿಗೆ ಬೀಗ ಜಡಿದಿದ್ದಾರೆ.

ಅಧ್ಯಕ್ಷರ ಆಯ್ಕೆ ಸಂಬಂಧ ಎ. 26ರಂದು ಕರೆಯಲಾಗಿದ್ದ ಸಭೆಯನ್ನು ಉಳ್ಳಾಲ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರ ಮನವಿಯ ಮೇರೆಗೆ ರದ್ದುಗೊಳಿಸಲಾಗಿತ್ತು. ಆದರೆ ಸಭೆ ರದ್ದುಗೊಂಡಿದ್ದರೂ ಒಂದು ಬಣವು ಅದೇ ದಿನ ಬೆಳಗ್ಗೆ ಅಧ್ಯಕ್ಷರ ಕಚೇರಿಯಲ್ಲಿ ಕುಳಿತು ನಾನೇ ಅಧ್ಯಕ್ಷನೆಂದು ಸ್ವಯಂ ಘೋಷಿಸಿಕೊಂಡಿದ್ದರು. ಈ ಬಗ್ಗೆ ಸ್ಥಳೀಯರು ಉಳ್ಳಾಲ ಖಾಝಿ ಅವರಿಗೆ ಮಾಹಿತಿ ನೀಡಿದ್ದು, ಅದರಂತೆ ಅವರು ಸಂಜೆ ಹೊತ್ತಿಗೆ ಬಂದು ಅಬ್ದುಲ್ಲಾ ಬುಖಾರಿ ಕಲ್ಲಾಪು ಎಂಬವರನ್ನು ಹಂಗಾಮಿಯಾಗಿ ನೇಮಿಸಿದ್ದರು. ಇದು ಇನ್ನೊಂದು ಬಣದ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಗೊಂದಲ ನಿವಾರಣೆಯಾಗುವವರೆಗೆ ಅಧ್ಯಕ್ಷರ ಕಚೇರಿಗೆ ಪೊಲೀಸರ ಸಮ್ಮುಖದಲ್ಲಿ ವಕ್ಫ್ ಅಧಿಕಾರಿಗಳು ಬೀಗ ಹಾಕಿ ಮುದ್ರೆಯನ್ನು ಒತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News