×
Ad

ಸುಳ್ಯ : ಮಳೆಗಾಗಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

Update: 2016-04-29 17:50 IST

ಸುಳ್ಯ, ಎ.29: ಬಿಸಿಲಿನ ಪ್ರಖರತೆ ದಿನೇ ದಿನೇ ಹೆಚ್ಚಾಗುತ್ತಿದ್ದು, ನೀರಿಗಾಗಿ ಎಲ್ಲೆಡೆ ಹಾಹಾಕಾರವೆದ್ದಿದೆ. ಒಂದು ಬಾರಿ ಬಂದ ಮಳೆರಾಯ ಮತ್ತೆ ಇತ್ತ ಸುಳಿದಿಲ್ಲ. ಪರಿಣಾಮ ಜಲಮೂಲ ಬರಿದಾಗತೊಡಗಿದೆ. ಕೆರೆ, ಬಾವಿಗಳು ಬತ್ತತೊಡಗಿದೆ. ತೋಟಗಳು ನೀರಿಲ್ಲದೆ ಸುಟ್ಟುಹೋಗುತ್ತಿವೆ. ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಎಲ್ಲಕ್ಕಿಂತ ಗಂಭೀರ ವಿಷಯವೆಂದರೆ ಸುಳ್ಯದ ಪಾಲಿಗೆ ಜೀವದಾಯಿನಿಯಾದ ಪಯಸ್ವಿನಿಯ ಒಡಲು ಕೂಡಾ ಬರಿದಾಗತೊಡಗಿದೆ. ಪಯಸ್ವಿನಿಯತ್ತ ದೃಷ್ಟಿ ಹರಿಸಿದರೆ ಅಲ್ಲಲ್ಲಿ ಒಂದಷ್ಟು ನೀರು ಮಾತ್ರ ಕಂಡುಬರುತ್ತಿದೆ.

 ಮಸೀದಿಗಳಲ್ಲಿ ಪ್ರಾರ್ಥನೆ: ಬೇಗನೇ ಮಳೆ ಬಂದು ಜಲಕ್ಷಾಮ ನೀಗಲಿ ಎಂದು ಶುಕ್ರವಾರ ತಾಲೂಕಿನ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ತಾಲೂಕಿನ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರದ ನಮಾಜಿನ ಬಳಿಕ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮೊಗರ್ಪಣೆ ಜುಮಾ ಮಸೀದಿಯಲ್ಲಿ ಖತೀಬ್ ಸುಲೈಮಾನ್ ಪೈಝಿಲಿಯವರ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು.

  ಬಾವಿಗಳ ದುರಸ್ತಿ: ಕುಡಿಯುವ ನೀರು ಪೂರೈಕೆಗೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಗರ ಪಂಚಾಯತ್ ಆಡಳಿತ ಮಾಡುತ್ತಿದೆ. ಬಳಕೆಯಾಗದೇ ಪಾಳು ಬಿದ್ದಿದ್ದ ಸಾರ್ವಜನಿಕ ಬಾವಿಗಳನ್ನು ದುರಸ್ತಿ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ನೀಡುವ ಕಾರ್ಯ ಆರಂಭಗೊಂಡಿದೆ. ಸುಳ್ಯದ ಹಳೆಗೇಟಿನಲ್ಲಿ ಜಯನಗರ ತಿರುಗುವಲ್ಲಿದ್ದ ಸಾರ್ವಜನಿಕ ಬಾವಿಯಲ್ಲಿ ನೀರಿದ್ದರೂ ಸಾರ್ವಜನಿಕರು ನಳ್ಳಿ ನೀರನ್ನು ಬಳಕೆ ಮಾಡುತ್ತಿದ್ದುದರಿಂದ ಬಾವಿಯು ಪಾಳು ಬಿದ್ದಿತ್ತು. ಅದರಲ್ಲಿ ತ್ಯಾಜ್ಯವನ್ನು ತುಂಬಲಾಗಿತ್ತು. ಸುಳ್ಯ ನಪಂ ವತಿಯಿಂದ ಅದನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಿ

ತಹಶೀಲ್ದಾರ್ ಮನವಿ:

ನೀರಿನ ಕೊರತೆ ನೀಗಿಸಲು ತಾಲೂಕು ಆಡಳಿತವೂ ಕ್ರಮಕ್ಕೆ ಮುಂದಾಗಿದ್ದು, ಪಯಸ್ವಿನಿ ಹೊಳೆಗೆ ಅಳವಡಿಸಲಾದ ಪಂಪು ಹಾಗೂ ಒಡ್ಡುಗಳನ್ನು ತೆರವುಗೊಳಿಸಲು ಮನವಿ ಮಾಡಿದ್ದಾರೆ.

ತಹಶಿಲ್ದಾರ್ ಅನಂತ ಶಂಕರ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಹಾಗೂ ಸಿಬ್ಬಂದಿ ವರ್ಗ ಪಯಸ್ವಿನಿ ನದಿ ದಡದ ರೈತರ ಮನೆಗೆ ತೆರಳಿ ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಸಮಸ್ಯೆ ಎದುರಾಗಿದ್ದು, ಮಳೆ ಬರುವವರೆಗೆ ನದಿ ನೀರನ್ನು ಕೃಷಿ ಹಾಗೂ ಕೈಗಾರಿಕೆಗಳಿಗೆ ಬಳಕೆ ಮಾಡದಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರೈತರು ಸಹಕರಿಸುವುದಾಗಿ ಭರವಸೆ ನೀಡಿದರು. ಜನರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದ್ದರಿಂದ ಅರಂಬೂರಿನಿಂದ ಸಂಪಾಜೆವರೆಗೆ ನದಿ ದಡದ ರೈತರ ಮನೆಗಳಿಗೆ ತೆರಳಿ ಮನವಿ ಮಾಡಲಾಗುತ್ತದೆ. ನದಿಗೆ ಹಾಕಿದ್ದ ಒಡ್ಡುಗಳನ್ನು ತೆರವುಗೊಳಿಸಿ ನೀರನ್ನು ಹರಿಯ ಬಿಡಲಾಗುತ್ತದೆ. ಪಂಪು ಬಳಕೆ ನಿಂತರೆ ಸುಳ್ಯ ನಗರಕ್ಕೆ ಕುಡಿಯವ ನೀರಿಗೆ ಸಮಸ್ಯೆ ಎದುರಾಗದು ಎಂದು ತಹಶೀಲ್ದಾರ್ ಅನಂತ ಶಂಕರ ಹೇಳಿದರು. ಮನವಿಗೆ ರೈತರು ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿಗಳಿಗೆ ಈ ಕುರಿತು ವರದಿ ನೀಡಲಾಗುತ್ತದೆ. ಅವರು ಮೆಸ್ಕಾಂಗೆ ಸೂಚನೆ ನೀಡಿ ಅಂತಹ ಪಂಪುಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಅವಕಾಶವಿದೆ ಎಂದು ಅವರು ಹೇಳಿದರು.

ಶನಿವಾರ ವಿಶೇಷ ಸಬೆ:

ಸುಳ್ಯ ತಾಲೂಕಿನಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಪರಿಹಾರದ ಕುರಿತಂತೆ ಚರ್ಚಿಸಲು ಶನಿವಾರ ಸಂಜೆ 4:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಸುಳ್ಯ ತಾಪಂ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಜಿಲ್ಲಾಧಿಕಾರಿ, ಸುಳ್ಯ ತಹಶೀಲ್ದಾರ್, ಶಾಸಕರು, ಜಿಪಂ ಸದಸ್ಯರು, ತಾಪಂ ಸದಸ್ಯರುಗಳು, ತಾಲೂಕಿನ ಎಲ್ಲ ಗ್ರಾಪಂನ ಪಿಡಿಒಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಶನಿವಾರ ಬೆಳಗ್ಗೆ ನಪಂನಲ್ಲೂ ಸಭೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News