×
Ad

94ಸಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಸೋಣಂಗೇರಿ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿಯ ಆರೋಪ

Update: 2016-04-29 18:02 IST

ಸುಳ್ಯ, ಎ.29: ಜಾಲ್ಸೂರು ಗ್ರಾಪಂ ವ್ಯಾಪ್ತಿಯಲ್ಲಿ 94ಸಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಹಲವು ಫಲಾನುವಿಗಳ ಅರ್ಜಿ ವಿಲೇವಾರಿ ಬಾಕಿ ಇದ್ದು, ಇದನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಹಾಗೂ ಇದರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಸೋಣಂಗೇರಿ ಭ್ರಷ್ಟಾಚಾರ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸತ್ಯಶಾಂತಿ ತ್ಯಾಗಮೂರ್ತಿ, ಬಡ ಹಾಗೂ ಕೂಲಿ ಕಾರ್ಮಿಕರು ಅಧಿಕವಾಗಿರುವ ಈ ಗ್ರಾಮದಲ್ಲಿ ಅನೇಕರಿಗೆ ಈವರೆಗೆ ಯಾವುದೇ ಪ್ರಯೋಜನ ದೊರೆತಿಲ್ಲ. 94ಸಿ ಯೋಜನೆಯಲ್ಲಿ ಜಂಟಿ ಸರ್ವೇ ನಡೆಸಲು ಅರಣ್ಯ ಮತ್ತು ಕಂದಾಯ ಇಲಾಖೆಗಳಿಗೆ ಒತ್ತಾಯಿಸಿರುವ ತಾಪಂ ಸದಸ್ಯ ಅಶೋಕ್ ನೆಕ್ರಾಜೆಯವರ ಕ್ರಮಕ್ಕೆ ನಮ್ಮ ಪೂರ್ಣ ಬೆಂಬಲವಿದೆ. 94 ಸಿ ಯೋಜನೆಯ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕೆಂದು ಈಗಾಗಲೇ ಶಾಸಕರು ಮತ್ತು ತಹಶೀಲ್ದಾರ್‌ರಿಗೆ ಮನವಿ ಮಾಡಿದ್ದೇವೆ. 1 ವಾರದೊಳಗೆ ಜಂಟಿ ಸರ್ವೇ ನಡೆಸಿ ಪರಿಹಾರ ಕಲ್ಪಿಸಿಕೊಡದಿದ್ದರೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದರು. ಸರಕಾರದಿಂದ ದೊರಕುವ ಯಾವುದೇ ಯೋಜನೆಗಳು ನಮ್ಮ ಗ್ರಾಮಕ್ಕೆ ಸರಿಯಾಗಿ ತಲುಪುತ್ತಿಲ್ಲ. ರಾಜಕಾರಣಿಗಳ ಶಿಫಾರಸ್ಸಿಗೆ, ಅಧಿಕಾರಿಗಳಿಗೆ ಲಂಚ ನೀಡಿದರೆ ಮಾತ್ರ ಕೆಲಸ ಕಾರ್ಯಗಳು ಆಗುತ್ತಿವೆ. ಇಂತಹ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಬೇಕು ಎಂದವರು ಆಗ್ರಹಿಸಿದರು.

ಬಿ.ಸುಬ್ರಹ್ಮಣ್ಯಂ, ಬಾಲು ಕುಕ್ಕಂದೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News