ಅಲ್ಪಸಂಖ್ಯಾತ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ ಉತ್ತಮವಾಗಿದೆ: ಆಸ್ಕರ್ ಫೆರ್ನಾಂಡಿಸ್
ಮಂಗಳೂರು, ಎ.29: ನಗರದ ಬಂದರ್‌ನ ಅಜೀಜುದ್ದೀನ್ ರಸ್ತೆಯ ಸಫಾ ಪ್ಲಾಜಾದಲ್ಲಿರುವ ಮಿಲ್ಲತ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬೆಳ್ಳಿ ಹಬ್ಬ ಸಂಭ್ರಮವನ್ನು ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಇಂದು ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸಮಾಜದ ಬಂಧುಗಳಿಗೆ ನೆರವು ನೀಡಬೇಕೆಂಬ ಉದ್ದೇಶದೊಂದಿಗೆ ಹಂಝ ಬಾವ, ಯು.ಟಿ.ಫರೀದ್ ಅವರು 261 ಸದಸ್ಯರುಗಳೊಂದಿಗೆ ಆರಂಭಿಸಿದ ಮಿಲ್ಲತ್ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿ 25 ವರ್ಷಗಳಲ್ಲಿ ಮಾಡಿರುವ ಸಾಧನೆ ಶ್ಲಾಘನೀಯ. ಸಂಸ್ಥೆಯು ಮುಂದಿನ 25 ವರ್ಷಗಳಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ ಹೆಚ್ಚಿನ ಸದಸ್ಯರಿಗೆ ಪ್ರಯೋಜನ ಸಿಗುವಂತಾಗಲಿ ಎಂದು ಹೇಳಿದರು.
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರಕಾರ ಸಾಕಷ್ಟು ನೆರವು ನೀಡುತ್ತಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಶಿಕ್ಷಣ ಜ್ಞಾನ ಉತ್ತಮವಿದ್ದು ಇದನ್ನು ಸದುಪಯೋಗಪಡಿಸಬೇಕು ಎಂದು ಹೇಳಿದರು.
ಮಿಲ್ಲತ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಮರಣ ಸಂಚಿಕೆಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ದ.ಕ ಜಿಲ್ಲೆಯಲ್ಲಿ ಸಹಕಾರಿ ಚಳವಳಿ ಸಾಕಷ್ಟು ಯಶಸ್ಸು ಕಂಡಿದ್ದು ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳು ಅತ್ಯುತ್ತಮ ಸಾಧನೆ ಮಾಡಿದೆ. ಕೆಲವು ಸಹಕಾರಿ ಬ್ಯಾಂಕುಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ಉತ್ತಮ ಸಾಧನೆ ಮಾಡುತ್ತಿದೆ. ಸಹಕಾರಿ ಬ್ಯಾಂಕ್ ಆಗಿ ಮಿಲ್ಲತ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸದಸ್ಯರುಗಳು ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಇನ್ನಷ್ಟು ಉತ್ತಮ ಫಲಿತಾಂಶ ಸಿಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲ್ಲತ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಿಲ್ಲತ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷರಾದ ಅಬ್ದುಸ್ಸಮದ್, ಅನ್ವರ್ ಹುಸೈನ್ (ರೀಕೋ) ಅವರನ್ನು ಸಚಿವ ಅಭಯಚಂದ್ರ ಜೈನ್ ಸನ್ಮಾನಿಸಿದರು.
ಸಮಾರಂಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಶಾಸಕ ಜೆ.ಆರ್.ಲೋಬೊ, ಮನಪಾ ಸದಸ್ಯರಾದ ರಮೀಝಾ ಬಾನು, ಪೂರ್ಣಿಮಾ, ಕೋ ಆಪರೇಟಿವ್ ಸೊಸೈಟಿಯ ಉಪನಿಬಂಧಕ ಬಿ.ಕೆ.ಸಲೀಂ, ಬ್ಲೋಸಮ್ ಫೆರ್ನಾಂಡಿಸ್, ಮಿಲ್ಲತ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ನಿರ್ದೇಶಕರಾದ ಹಾಜಿ ಅಬ್ದುಸ್ಸಲಾಂ, ಮುಲ್ಕಿ ಅಬ್ದುರ್ರಝಾಕ್, ನಿಸಾರ್ ಫಕೀರ್ ಮುಹಮ್ಮದ್, ಮುನೀರ್ ಅಹ್ಮದ್, ಮುಹಮ್ಮದ್ ಅಯ್ಯೂಬ್, ನವಾಝ್ ಅಬ್ಬಾಸ್, ಎನ್.ಪಿ. ಪುಷ್ಪರಾಜನ್, ನೂರ್ ಅಮೀನ, ಶಾಹಿದಾ ಮೊದಲಾದವರು ಉಪಸ್ಥಿತರಿದ್ದರು. ಮಿಲ್ಲತ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಎಂ.ಅಬ್ದುಲ್ ಅಝೀಝ್ ಕುದ್ರೋಳಿ ಸ್ವಾಗತಿಸಿದರು. ಕಾರ್ಯದರ್ಶಿ ಶೆರಿನ್ ಬಾನು ವಂದಿಸಿದರು. ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.