ಸಾಮೂಹಿಕ ಮತ್ತು ಅಂತರ್ಜಾತಿ ವಿವಾಹಗಳಿಂದ ಜಾತೀಯತೆ ಅಳಿಸಲು ಸಾಧ್ಯ: ಸಚಿವ ಮನೋಹರ ತಹಸೀಲ್ದಾರ್
ಬೆಳ್ತಂಗಡಿ, ಎ.29: ಸಾಮೂಹಿಕ ವಿವಾಹ ಮತ್ತು ಅಂತರ್ಜಾತಿ ವಿವಾಹಗಳಿಂದ ಸಮಾಜದಲ್ಲಿರುವ ಜಾತೀಯತೆಯನ್ನು ಅಳಿಸಲು ಸಾಧ್ಯ. ಕ್ಷೇತ್ರದಲ್ಲಿ 45 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಾಮೂಹಿಕ ವಿವಾಹ ಇಂತಹ ಸಮಸ್ಯೆಗಳ ನಿವಾರಣೆಗೆ ನೆರವಾಗಿದೆ ಎಂದು ರಾಜ್ಯ ಮುಜರಾಯಿ ಸಚಿವ ಮನೋಹರ ತಹಸೀಲ್ದಾರ್ ಹೇಳಿದರು.
ಶುಕ್ರವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 45ನೆ ವರ್ಷದ ಸಾಮೂಹಿಕ ಉಚಿತ ವಿವಾಹ ಸಮಾರಂಭದಲ್ಲಿ ಹಸೆಮಣೆಗೇರಿದ 127 ಜೋಡಿ ವಧೂವರರಿಗೆ ಆಶೀರ್ವದಿಸಿ ಮಾತನಾಡಿದರು.
ಸಾಮೂಹಿಕ ವಿವಾಹದ ಮೂಲಕ ದುಂದುವೆಚ್ಚಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರಕಾರವು ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ಪರಿಶಿಷ್ಟ ಜಾತಿ, ಪಂಗಡದ ದಂಪತಿಗೆ ತಲಾ 50,000 ರೂ. ಪ್ರೋತ್ಸಾಹಧನ ನೀಡುತ್ತಿದೆ. ಇಲ್ಲಿ ಮದುವೆಯಾದವರೂ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬಹುದು. ಜಾತಿಯತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿಯ ಮಹಿಳೆ ಅಂತರ್ಜಾತಿಯ ವಿವಾಹ ಮಾಡಿಕೊಂಡರೆ ಆ ದಂಪತಿಗೆ 3 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿಯ ಪುರುಷ ಅಂತರ್ಜಾತಿಯ ವಿವಾಹ ಮಾಡಿಕೊಂಡರೆ ಆ ದಂಪತಿಗೆ 2 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು. ಇದು ಈ ವರ್ಷದಿಂದಲೇ ಜಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿ, ಸಾಮೂಹಿಕ ವಿವಾಹವನ್ನು ಬಡವರ ವಿವಾಹ ಎಂಬಂತೆ ನೋಡಲಾಗುತ್ತಿದೆ. ಆದರೆ ಅದು ಸರಳ ವಿವಾಹ ಎಂಬಂತೆ ನೋಡುವ ಪ್ರವೃತ್ತಿ ಬೆಳೆಯಬೇಕು. ಇದೀಗ ಕೇವಲ ಬಡತನದ ಕಾರಣದಿಂದ ಸಾಮೂಹಿಕ ವಿವಾಹಗಳಲ್ಲಿ ಜೋಡಿಗಳು ವಿವಾಹವಾಗುತ್ತಿಲ್ಲ. ಆರ್ಥಿಕವಾಗಿ ಸಬಲಾಗಿರುವವರು ಸರಳವಾಗಿ ಮದುವೆಯಾಗ ಬಯಸುವವರೂ ಇಲ್ಲಿ ವಿವಾಹವಾಗುತ್ತಿದ್ದಾರೆ. ಇಂದು ಇಲ್ಲಿ ಇಬ್ಬರು ಪಿಎಚ್‌ಡಿ ಪದವೀಧರರು ಮದುವೆಯಾಗುತ್ತಿರುವುದು ವಿಶೇಷ. ಆಯಾ ಜಾತಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡದೆ ಎಲ್ಲರಿಗೂ ಒಂದೇ ವೇದಿಕೆಯಲ್ಲಿ ವಿವಾಹಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಜಾತಿಯ ಯಾವುದೇ ತಾರತಮ್ಯಗಳಿಲ್ಲ. ಈ ಬಾರಿ 19 ಜೋಡಿ ಅಂತರ್ಜಾತಿ ವಿವಾಹವಾಗಿದ್ದಾರೆ. ಮನೆಯವರು ಒಪ್ಪಿಯೇ ಈ ಮದುವೆಗಳು ನಡೆಯುತ್ತಿದೆ. ಇದು ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ದ್ಯೋತಕವಾಗಿದೆ. ಅಂತರ್ಜಾತಿಯ ವಿವಾಹಗಳಿಗೆ, ಅಂತರ್ಧರ್ಮೀಯ ವಿವಾಹಗಳಿಗೆ ಮುಂದಾಗುವವರ ಮರ್ಯಾದಾ ಹತ್ಯೆಗಳು ನಡೆಯುತ್ತಿರುವ ಇಂದಿನ ದಿನಗಳಲ್ಲಿ ಈ ಪರಿವರ್ತನೆ ಆಶಾದಾಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ವಸಂತ ಬಂಗೇರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಬ್ರಿಜೇಶ್ ಪಟೇಲ್, ಸಹ ಕಾರ್ಯದರ್ಶಿ ಸಂತೋಷ್ ಮೆನನ್, ಬಿರ್ಲಾ ಕಾರ್ಪೊರೇಶನ್‌ನ ಪ್ರಧಾನ ಆರ್ಥಿಕ ಅಧಿಕಾರಿ ಆದಿತ್ಯ ಸರೋಗಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಹೇಮಾವತಿ ವಿ.ಹೆಗ್ಗಡೆ, ಹಷೇಂದ್ರಕುಮಾರ್, ಬೆಳ್ತಂಗಡಿ ತಹಶೀಲ್ದಾರ್ ಪ್ರಸನ್ನ ಮೂರ್ತಿ, ಮಹಿಳಾ ಮತ್ತು ಶಿಶು ಕಲ್ಯಾಣ ಅಭಿವೃದ್ಧಿ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಡಿ.ಧರ್ಣಪ್ಪಸ್ವಾಗತಿಸಿದರು. ಅಲಂಕಾರ ಸಮಿತಿಯ ಸಂಚಾಲಕ ಬಾಲಕೃಷ್ಣ ಪೂಜಾರಿ ವಂದಿಸಿದರು. ಉಜಿರೆ ಎಸ್‌ಡಿಎಂ ಸನಿವಾಸ ಕಾಲೇಜಿನ ಉಪನ್ಯಾಸಕ ಸುನಿಲ್ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.