ನೀರಿನ ದಂಡನಾ ಶುಲ್ಕ ಮನ್ನಾಕ್ಕೆ ನಿರ್ಣಯ
ಮಂಗಳೂರು, ಎ. 29: ನಗರದ 65 ಮಂದಿ ಬಳಕೆದಾರರಿಗೆ ನೀರಿನ ಬಿಲ್‌ನ ದಂಡನಾ ಶುಲ್ಕವನ್ನು ಶೇ.100 ಮನ್ನಾ ಮಾಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಣಯಿಸಿದೆ. ನೀರಿನ ಅದಾಲತ್‌ನಲ್ಲಿ ಕೈಗೊಂಡಿರುವ ಈ ನಿರ್ಣಯಕ್ಕೆ ಮೇಯರ್ ಎಂ.ಹರಿನಾಥ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಂಗಳೂರು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರಕಿದೆ.
ಮನಪಾ ಮುಖ್ಯಸಚೇತಕ ಶಶಿಧರ ಹೆಗ್ಡೆ ಅವರು ಈ ವಿಷಯ ಸಭೆಯಲ್ಲಿ ಪ್ರಸ್ತಾವಿಸಿದರು. ದಂಡನಾ ಶುಲ್ಕದಲ್ಲಿ ವಿನಾಯಿತಿ ನೀಡುವ ಬಗ್ಗೆ ಮನಪಾ ನೀರಿನ ಅದಾಲತ್ ಸಮಿತಿ ರಚಿಸಿ ಅದಾಲತ್ ನಡೆಸಿತ್ತು. ಬಳಕೆದಾರರಿಗೆ ದಂಡ ವಿಧಿಸುವ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದೆ ನೀರಿನ ಬಿಲ್ ಹೆಚ್ಚು ಬಂದಿರುವುದರಿಂದ ಅವರ ತೊಂದರೆ ತಪ್ಪಿಸಲು ಆಕ್ಷೇಪಣಾ ಅರ್ಜಿ ಸ್ವೀಕರಿಸಲಾಗಿದೆ. ದಂಡನಾ ಶುಲ್ಕವನ್ನು ಪರಿಷ್ಕರಣೆ ಮಾಡುವಂತೆ ಬಳಕೆದಾರರಿಂದ 78 ಅರ್ಜಿಗಳನ್ನು ಅದಾಲತ್ ಸ್ವೀಕರಿಸಿದೆ. ಈ ಪೈಕಿ 7 ಅರ್ಜಿಗಳಿಗೆ ಶೇ.50 ದಂಡನಾ ಶುಲ್ಕ ಮನ್ನಾ ಮಾಡಿದ್ದರೆ, 65 ಅರ್ಜಿಯ ಶೇ.100 ದಂಡನಾ ಶುಲ್ಕ ಮನ್ನಾ ಮಾಡಲಾಗಿದೆ. 3 ಅರ್ಜಿಗಳಿಗೆ ದಂಡ ವಿಧಿಸಿಲ್ಲ, 2 ಅರ್ಜಿಗಳ ಸ್ಥಳ ತನಿಖೆಗೆ ಸೂಚಿಸಲಾಗಿದೆ ಎಂದರು.
ಕುಡ್ಸೆಂಪ್ ಎರಡನೆ ಹಂತದ ಯೋಜನೆಯ ಕುರಿತು ಅಧಿಕಾರಿಗಳು ಸಭೆಯಲ್ಲಿ ವಿವರ ನೀಡುತ್ತಿದ್ದಾಗ, ಸದಸ್ಯ ಮಹಾಬಲ ಮಾರ್ಲ ಸೇರಿದಂತೆ ಇತರರು ಮಾತನಾಡಿ, ಯಾರ ಗಮನಕ್ಕೆ ತಂದು ಸರ್ವೇ ನಡೆಸಲಾಗಿದೆ? ಎಲ್ಲಿ ಅಗತ್ಯ ಇದೆಯೋ ಅಲ್ಲಿ 2ನೆ ಹಂತದ ಕಾಮಗಾರಿ ಕೈಗೊಳ್ಳಲಾಗಿದೆಯೇ? ಎಂದು ಪ್ರಶ್ನಿಸಿದರು. ಕಾರ್ಪೊರೇಟರ್‌ಗಳನ್ನು ನಿರ್ಲಕ್ಷಿಸಿ ಕೇವಲ ಅಧಿಕಾರಿಗಳೇ ಕುಳಿತುಕೊಂಡು ಯೋಜನೆ ರೂಪಿಸಬೇಡಿ ಎಂದು ಅವರು ಒತ್ತಾಯಿಸಿದರು.
ಪಚ್ಚನಾಡಿಯ ತ್ಯಾಜ್ಯ ಸಂಸ್ಕರಣಾ ಘಟಕದ ಬಳಿಯಿರುವ ಖಾಸಗಿ ಮಾಲೀಕತ್ವದ 10 ಎಕ್ರೆ ಜಮೀನನ್ನು ಸ್ವಾಧೀನಪಡಿಸಿ, ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಸರಿಪಡಿಸುವಂತೆ ಗೊತ್ತುವಳಿ ನಿರ್ಣಯಿಸಲಾಯಿತು.
ಉಪಮೇಯರ್ ಸುಮಿತ್ರಾ ಕರಿಯ, ಆಯುಕ್ತ ಡಾ.ಎಚ್.ಎನ್.ಗೋಪಾಲಕೃಷ್ಣ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.
ತುಂಬೆ ಹೊಸ ಡ್ಯಾಂ ಮೇ ತಿಂಗಳಾಂತ್ಯಕ್ಕೆ ಪೂರ್ಣ
ತುಂಬೆ ಹೊಸ ಡ್ಯಾಂ ಯಾವಾಗ ಪೂರ್ಣಗೊಳ್ಳಲಿದೆ ಎಂದು ಬಿಜೆಪಿಯ ಸುಧೀರ್ ಶೆಟ್ಟಿ ಕಣ್ಣೂರು ಅವರ ಪ್ರಶ್ನೆಗೆ ಉತ್ತರಿಸಿದ ಮೇಯರ್, ಈಗಾಗಲೇ ಹೊಸ ಡ್ಯಾಂಗೆ 8 ಗೇಟು ಅಳವಡಿಕೆ ಮಾಡಲಾಗಿದೆ. ಮೇ ಅಂತ್ಯದೊಳಗೆ ಎಲ್ಲಾ ಗೇಟುಗಳನ್ನು ಅಳವಡಿಸಲಾಗುತ್ತದೆ ಎಂದರು. ಬಿಜೆಪಿಯ ತಿಲಕ್‌ರಾಜ್ ಮಾತನಾಡಿ, ಹಳೆಯ ಡ್ಯಾಂನಷ್ಟೇ ಎತ್ತರಕ್ಕೆ ನೀರನ್ನು ಹೊಸ ಡ್ಯಾಂನಲ್ಲಿ ಸಂಗ್ರಹಿಸುವುದಾ? ಎಂಬ ಪ್ರಶ್ನೆಗೆ ಉತ್ತರಿಸಿ ಅಧಿಕಾರಿಗಳು, ಹೊಸ ಡ್ಯಾಂ 7 ಮೀ. ಎತ್ತರವಿದ್ದರೂ, ಭೂಸ್ವಾಧೀನ ಪೂರ್ಣಗೊಳ್ಳದೆ ಅಷ್ಟು ಪ್ರಮಾಣದಲ್ಲಿ ನೀರು ನಿಲ್ಲಿಸಲು ಆಗುವುದಿಲ್ಲ. ಎಂದಿನಂತೆ 4 ಮೀ. ಮಾತ್ರ ಸದ್ಯಕ್ಕೆ ಸಂಗ್ರಹ ಎಂದರು.