×
Ad

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

Update: 2016-04-29 22:30 IST

ಮೂಡುಬಿದಿರೆ, ಎ.29: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ಗ್ರಾಮೀಣ ಉದ್ಯಮಶೀಲತೆಯನ್ನು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಬನ್ನಡ್ಕ ಸೋನ್ಸ್ ಫಾರ್ಮ್ಸ್‌ನ ಪ್ರವರ್ತಕ ಎಲ್.ಸಿ ಸೋನ್ಸ್ ಗುರುವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಪರಿಶ್ರಮಪಡುವ ಮನೋಭಾವ ಹಾಗೂ ಹೊಸತನವನ್ನು ಕಂಡುಕೊಳ್ಳುವ ಗುಣವಿದ್ದಾಗ ಯಶಸ್ಸು ಸಾಧ್ಯ. ಎಂಬಿಎ ವಿದ್ಯಾರ್ಥಿಗಳು ಡಿಗ್ರಿಯನ್ನು ಪಡೆದರೂ ಕೃಷಿ ಮತ್ತು ಕೃಷಿ ಸಂಬಂಧಿತ ಉದ್ಯಮ ನಡೆಸುವತ್ತ ಆಸಕ್ತಿಯನ್ನು ತೋರಬೇಕೆಂದು ಸಲಹೆ ನೀಡಿ, ತಾನು ವಿದೇಶದಲ್ಲಿ ಕೃಷಿ ಚಟುವಟಕೆಗಳನ್ನು ಕಲಿತು ಬಂದು ಯಶಸ್ಸಿನತ್ತ ಸಾಗಿರುವ ಕಥನವನ್ನು ವಿದ್ಯಾರ್ಥಿಗಳ ಮುಂದಿಟ್ಟರು. ಕೇಂದ್ರ ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಡಾ. ಪಿ.ಕೆ ತ್ರಿಪಾಠಿ ಮಾತನಾಡಿ, ಕೇಂದ್ರ ಸರಕಾರದಿಂದ ಗ್ರಾಮೀಣ ಉದ್ಯಮಶೀಲತೆಗೆ ದೊರೆಯುವ ಸೌಕರ್ಯ, ಸಹಾಯ ಮೊದಲಾದ ವಿಚಾರಗಳ ಬಗ್ಗೆ ತಿಳಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಸಮಾನತೆಯನ್ನು ಕಾಪಾಡಬೇಕಾಗಿದೆ. ದೇಶದಲ್ಲಿ 21ಲಕ್ಷದಷ್ಟು ಗ್ರಾಮೀಣ ಪ್ರದೇಶದ ಜನರಿದ್ದು, ಎರಡೂವರೆ ಲಕ್ಷ ಗ್ರಾಪಂಗಳು, 645 ಜಿಲ್ಲೆಗಳಿದ್ದು,ಶೇ.90ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಈ ಕಾರ್ಯಾಗಾರಗಳಿಂದ ಪ್ರೇರಣೆಯಾಗಬೇಕಾಗಿದೆ ಎಂದು ಹೇಳಿದರು.

ಪ್ರಾಂಶುಪಾಲ ಪೀಟರ್ ಫೆರ್ನಾಂಡಿಸ್, ಟ್ರಸ್ಟಿ ವಿವೇಕ ಆಳ್ವ ಉಪಸ್ಥಿತರಿದ್ದರು.

ಎಂಬಿಎ ವಿಭಾಗದ ಡೀನ್ ಅಲೆಗ್ಸಾಂಡರ್ ಮ್ಯಾಥ್ಯೂಸ್ ಸ್ವಾಗತಿಸಿದರು. ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ. ಕುಶಾಲಪ್ಪ ವಂದಿಸಿದರು. ಕೃಪಾ ಮತ್ತು ಸನಾ ಕೌಸರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News