×
Ad

ಉಳ್ಳಾಲ : ತಲವಾರು ದಾಳಿಗೆ ಒಳಗಾಗಿದ್ದ ಮುಹಮ್ಮದ್ ಸೈಫಾನ್ ಮೃತ್ಯು

Update: 2016-04-30 15:37 IST

ಮಂಗಳೂರು, ಎ.30: ಉಳ್ಳಾಲದಲ್ಲಿ ದುಷ್ಕರ್ಮಿಗಳ ತಲವಾರು ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಹಮ್ಮದ್ ಸೈಫಾನ್(20) ಇಂದು ಮೃತಪಟ್ಟಿದ್ದಾರೆ.


 ಕಳೆದ ಸೋಮವಾರ ರಾತ್ರಿ ತೊಕ್ಕೊಟ್ಟು ಮೇಲ್ಸೇತುವೆಯ ಬಳಿ ಮುಹಮ್ಮದ್ ಸೈಫಾನ್ ಮೇಲೆ ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ದಾಳಿ ನಡೆಸಿತ್ತು. ದಾಳಿಯಿಂದ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸೈಫಾನ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.


 ತೊಕ್ಕೊಟ್ಟು ಪಿಲಾರು ನಿವಾಸಿಯಾಗಿದ್ದ ಸೈಫಾನ್ ತಡರಾತ್ರಿ ಸುಮಾರು 12:30ಕ್ಕೆ ರಾಣಿಪುರ ಮದಕದಲ್ಲಿ ನಡೆದ ಸಮಾರಂಭವೊಂದರಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಚೆಂಬುಗುಡ್ಡೆ ಮತ್ತು ಪಿಲಾರು ನಿವಾಸಿಗಳಾದ ನಿಝಾಮ್(21) ಮತ್ತು ಮಹಮ್ಮದ್ ಸಲೀಂ (25) ಎಂಬವರೊಂದಿಗೆ ವಾಪಸ್ಸಾಗುತ್ತಿದ್ದರು. ತೊಕ್ಕೊಟ್ಟಿನ ಚರ್ಚ್‌ರೋಡ್‌ನಲ್ಲಿರುವ ಕ್ಯಾಟರಿಂಗ್ ಅಂಗಡಿಯಲ್ಲಿ ಸಾಮಗ್ರಿಗಳನ್ನು ಇಟ್ಟು ಮನೆ ಕಡೆ ಹಿಂದಿರುಗುತ್ತಿದ್ದರು. ಈ ಸಂದರ್ಭ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಹೊಂಚು ಹಾಕಿ ಕುಳಿತಿದ್ದ ಐವರು ದುಷ್ಕರ್ಮಿಗಳ ತಂಡ ಹಠಾತ್ತನೆ ಈ ಮೂವರ ಮೇಲೆ ದಾಳಿ ನಡೆಸಿತ್ತು. ಪರಿಣಾಮವಾಗಿ ಬೈಕ್ ಚಲಾಯಿಸುತ್ತಿದ್ದ ನಿಝಾಮ್ ಬೈಕನ್ನು ಕೆಳಗೆ ಹಾಕಿ ಪ್ರಾಣ ರಕ್ಷಿಸಲು ಅಲ್ಲಿಂದ ಪರಾರಿಯಾಗಿದ್ದರು. ಇತ್ತ ಕೆಳಗೆ ಬಿದ್ದ ಸಲೀಂನ ಮೊಣಕಾಲಿಗೆ ಗಾಯವಾದರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕೆಳಗೆ ಬಿದ್ದಿದ್ದ ಸೈಫಾನ್‌ನ ಮೇಲೆ ದುಷ್ಕರ್ಮಿಗಳ ತಂಡ ತಲವಾರಿನಿಂದ ಯದ್ವಾ ತದ್ವಾ ಹಲ್ಲೆ ನಡೆಸಿತ್ತು. ಬಲ ಪಕ್ಕೆಲುಬು, ಸೊಂಟಕ್ಕೆ ಬಲವಾದ ಗಾಯಗಳಾಗಿ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ ಸೈಫಾನ್ ಇಂದು ಮಧ್ಯಾಹ್ನದ ವೇಳೆ ಮೃತಪಟ್ಟಿದ್ದಾರೆ.

'ಹಗಲು-ರಾತ್ರಿ ದುಡಿದು ಕುಟುಂಬಕ್ಕೆ ಆಧಾರವಾಗಿದ್ದ'

ವೃತ್ತಿಯಲ್ಲಿ ವೆಲ್ಡರ್ ಆಗಿದ್ದ ಸೈಫಾನ್‌ನದ್ದು ತೀರಾ ಬಡಕುಟುಂಬ. ತಾಯಿ ಹಾಗೂ ಇಬ್ಬರು ಸಹೋದರಿಯರು ಮತ್ತು ಮೂವರು ಸಹೋದರರೊಂದಿಗೆ ವಾಸವಾಗಿದ್ದರು. ಸಹೋದರರೆಲ್ಲರೂ ಕೂಲಿ ಕೆಲಸ ಮಾಡುತ್ತಿದ್ದಾರೆ. ಕುಟುಂಬವನ್ನು ನಿಭಾಯಿಸಲು ಸೈಫಾನ್ ಹಗಲಲ್ಲಿ ವೆಲ್ಡಿಂಗ್‌ನ ಕೆಲಸ ಮಾಡುತ್ತಿದ್ದರೆ, ರಾತ್ರಿ ಹೊತ್ತಿನಲ್ಲಿ ಮದುವೆ, ಇನ್ನಿತರ ಶುಭ ಸಮಾರಂಭಗಳಿಗಾಗಿ ಕ್ಯಾಟರಿಂಗ್‌ವನ್ನೂ ಮಾಡುತ್ತಿದ್ದರು. ಹಗಲು-ರಾತ್ರಿ ದುಡಿದು ಮನೆಯ ಖರ್ಚು ನಿಭಾಯಿಸುವ ಮೂಲಕ ಕುಟುಂಬಕ್ಕೆ ಆಧಾರವಾಗಿದ್ದರು ಎಂದು ಸೈಫಾನ್ ರ ಕುಟುಂಬಸ್ಥರು ತಿಳಿಸಿದ್ದಾರೆ.


ಎಂದಿನಂತೆ ಸೈಫಾನ್ ಕಳೆದ ಸೋಮವಾರವೂ ವೆಲ್ಡಿಂಗ್ ಕೆಲಸವನ್ನು ಮುಗಿಸಿ ಅದೇ ದಿನ ರಾತ್ರಿ ಹೊತ್ತಿನಲ್ಲಿ ರಾಣಿಪುರ ಮದಕದಲ್ಲಿ ನಡೆದ ಸಮಾರಂಭವೊಂದರಲ್ಲಿ ಕ್ಯಾಟರಿಂಗ್ ಸರ್ವಿಸ್ ಮುಗಿಸಿ ತಾನು ಕೊಂಡೊಯ್ದಿದ್ದ ಕ್ಯಾಟರಿಂಗ್ ಸಾಮಾನುಗಳನ್ನು ತೊಕ್ಕೊಟ್ಟಿನ ಚರ್ಚ್‌ರೋಡ್‌ನಲ್ಲಿರುವ ಕ್ಯಾಟರಿಂಗ್ ಅಂಗಡಿಯಲ್ಲಿ ಇಟ್ಟು ಬಂದಿದ್ದರು. ರಾತ್ರಿ ಹೊತ್ತಿನಲ್ಲೂ ಕೆಲಸ ಮಾಡಿ ಹಣ ಸಂಪಾದಿಸಿ ಮನೆಯ ಖರ್ಚನ್ನು ನೋಡುತ್ತಿದ್ದ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News