ನಾನು ಅಧ್ಯಕ್ಷನಾಗಿ ಕ್ರಮಬದ್ಧವಾಗಿ ಆಯ್ಕೆಯಾಗಿದ್ದೇನೆ: ಹಾಜಿ ಅಬ್ದುರ್ರಶೀದ್

Update: 2016-04-30 13:29 GMT

 ಮಂಗಳೂರು, ಎ.30: ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ದರ್ಗಾ ಆಡಳಿತ ಸಮಿತಿಗೆ ಅಧ್ಯಕ್ಷನಾಗಿ ನನ್ನ ಆಯ್ಕೆ ಕ್ರಮಬದ್ಧವಾಗಿದೆ ಎಂದು ಮಾಜಿ ಮಂಡಲ ಪ್ರಧಾನರಾದ ಹಾಜಿ ಅಬ್ದುರ್ರಶೀದ್ ಪ್ರತಿಕ್ರಿಯಿಸಿದ್ದಾರೆ.

ಸಮಿತಿಯಲ್ಲಿರುವ 50 ಸದಸ್ಯರ ಪೈಕಿ 49 ಮಂದಿ ಸದಸ್ಯರಿಗೆ ಸಮಿತಿಯ ಅಧ್ಯಕ್ಷರು ನೋಟಿಸ್ ನೀಡಿ ಎಪ್ರಿಲ್ 26ರಂದು ಬೆಳಗ್ಗೆ 10 ಗಂಟೆಗೆ ನೂತನ ಅಧ್ಯಕ್ಷರ ಆಯ್ಕೆ ಸಂಬಂಧಿತ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ಸಮಿತಿಯ 26 ಮಂದಿ ಸದಸ್ಯರು ಅಂದು ಸಭೆಗೆ ಹಾಜರಾಗಿದ್ದರು. ಸಭೆಯಲ್ಲಿ ಕಾರ್ಯದರ್ಶಿ ಇಲ್ಯಾಸ್ ಅವರು ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಅಧ್ಯಕ್ಷರಾದ ಹಂಝ ಅವರು ಹಾಜರಿರಬೇಕಿತ್ತು. ಆದರೆ ಬೆಳಗ್ಗೆ 11 ಗಂಟೆಯಾದರೂ ಅವರೇ ಕರೆದಿದ್ದ ಸಭೆಗೆ ಅವರು ಹಾಜರಾಗಲಿಲ್ಲ. ಕಾರ್ಯದರ್ಶಿಯವರು ಅವರನ್ನು ಫೋನ್ ಮೂಲಕ ಸಂಪರ್ಕಿಸಿದಾಗ ತನ್ನ ಅನುಪಸ್ಥಿತಿಯಲ್ಲಿ ಸಭೆ ನಡೆಸುವಂತೆ ಸೂಚಿಸಿದ್ದಾರೆ ಎಂದು ಕಾರ್ಯದರ್ಶಿಯವರು ತನಗೆ ತಿಳಿಸಿರುವುದಾಗಿ ರಶೀದ್ ವಿವರಿಸಿದರು.

ಅದರಂತೆ ನಾವು 11 ಗಂಟೆಗೆ ಸಭೆ ಸೇರಿದೆವು. 26 ಮಂದಿ ಸಮಿತಿ ಸದಸ್ಯರು ಇದ್ದುದರಿಂದ ನಿಯಮ ಪ್ರಕಾರ ಕೋರಂ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಭೆ ಮುಂದುವರಿಯಿತು. ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬಂತು. ಎಲ್ಲರ ಅನುಮೋದನೆಯಂತೆ ಅಂತಿಮವಾಗಿ ಸಮಿತಿಯ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಲಾಯಿತು. ನನ್ನ ಆಯ್ಕೆಯು ನಿಯಮ ಪ್ರಕಾರ ಮತ್ತು ಕ್ರಮಬದ್ಧವಾಗಿಯೇ ನಡೆದಿದೆ. ಇದಕ್ಕೆ ಸಮಿತಿಯ ಕಾರ್ಯದರ್ಶಿಯವರೇ ಸಾಕ್ಷಿಯಾಗಿದ್ದಾರೆ. ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬಳಿಕ ಕಾರ್ಯದರ್ಶಿಯವರೇ ನನಗೆ ಅಧ್ಯಕ್ಷರ ಕಚೇರಿಯ ಕೀಲಿ ಕೈ ಮತ್ತು ನಿರ್ಣಯ ಪುಸ್ತಕವನ್ನು ಹಸ್ತಾಂತರ ಮಾಡಿದ್ದಾರೆ ಎಂದು ಅವರು ತಿಳಿಸಿದರು.

 ಆದರೆ, "ಇತ್ತೀಚೆಗೆ ಉಳ್ಳಾಲ ವ್ಯಾಪ್ತಿಯಲ್ಲಿ ಕೆಲವು ಅಹಿತಕರ ಘಟನೆಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಸೆಕ್ಷನ್ 144 ಜಾರಿಯಾಗಿರುವುದರಿಂದ ಪೊಲೀಸರ ಮನವಿ ಮೇರೆಗೆ ಸಭೆಯನ್ನು ಮುಂದೂಡಲಾಗಿತ್ತು" ಎಂಬುದರಲ್ಲಿ ಸತ್ಯಾಂಶವಿಲ್ಲ. ಸೆಕ್ಷನ್ ಜಾರಿಯಾಗಿರುವುದು ಸಂಜೆ 6 ಗಂಟೆಯ ನಂತರ. ಆದ್ದರಿಂದ ಸಭೆಯು ಸೆಕ್ಷನ್ 144 ಜಾರಿಯಾಗುವ ಮುನ್ನವೇ ನಡೆದಿದೆ. ನಿಯಮ ಮೀರಿ ಸಂಜೆ 7 ಗಂಟೆ ಹೊತ್ತಿಗೆ ಇನ್ನೊಂದು ಸಭೆ ನಡೆಸಿರುವುದು ಸರಿಯಲ್ಲ. ಈ ಸಭೆಯಲ್ಲಿ ಅಬ್ದುಲ್ಲಾ ಬುಖಾರಿ ಕಲ್ಲಾಪು ಎಂಬವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಕ್ರಮಬದ್ಧವಾಗಿಲ್ಲ ಎಂದರು.

ಅಧ್ಯಕ್ಷರ ಆಯ್ಕೆ ಸಂಬಂಧಿತ ಸಭೆಯಲ್ಲಿ ಉಳ್ಳಾಲ ಖಾಝಿಯವರಾದ ಫಝಲ್ ಹಾಮಿದ್ ಕೋಯಮ್ಮ ತಂಙಳ್ ಕೂರತ್ ಅವರ ಹಾಜರಾತಿ ಕಡ್ಡಾಯವಲ್ಲ. ಸಂಪ್ರದಾಯದಂತೆ ಅವರನ್ನು ಸಭೆಗೆ ಕರೆಸುತ್ತಾರೆ. ಅವರು ಸಭೆಯಲ್ಲಿ ಪಾಲ್ಗೊಂಡು ಅಧ್ಯಕ್ಷರ ಆಯ್ಕೆಯಾದ ಬಳಿಕ ಪ್ರಮಾಣವಚನ ಬೋಧಿಸುತ್ತಾರೆ ಎಂದು ರಶೀದ್ ತಿಳಿಸಿದರು.

ಕೂರತ್ ತಂಙಳ್ ಬಗ್ಗೆ ಗೌರವವಿದೆ

 ಉಳ್ಳಾಲ ಖಾಝಿ ಫಝಲ್ ಹಾಮಿದ್ ಕೋಯಮ್ಮ ತಂಙಳ್ ಕೂರತ್ ಅವರ ಬಗ್ಗೆ ನನಗೆ ಹಿಂದಿನಿಂದಲೂ ಗೌರವವಿದೆ. ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮದ್ರಸ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಅವರ ತಂದೆ ಉಳ್ಳಾಲ ತಂಙಳ್ ತಾಜುಲ್ ಉಲಮಾ ಅವರು ನೀಡಿರುವ ಕೊಡುಗೆ ಅನನ್ಯವಾಗಿದೆ. ಅದನ್ನು ನಾನು ಮರೆಯುವಂತಿಲ್ಲ. ತಾಜುಲ್ ಉಲಮಾ ಮತ್ತು ಕೂರತ್ ತಂಙಳ್ ಅವರಿಬ್ಬರ ಬಗ್ಗೆಯೂ ನಾನು ಅಪಾರ ಗೌರವವನ್ನು ಹೊಂದಿದ್ದೇನೆ ಎಂದು ಹಾಜಿ ಅಬ್ದುರ್ರಶೀದ್ ಹೇಳಿದರು.

ಗೋರಿ ಹಾನಿಗೂ ಅಧ್ಯಕ್ಷರ ಆಯ್ಕೆಗೂ ಸಂಬಂಧವಿಲ್ಲ

 ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಬಳಿಕ ಆರೋಗ್ಯ ಸಚಿವ ಹಾಗೂ ಶಾಸಕ ಯು.ಟಿ.ಖಾದರ್ ಅವರ ಮಾತಾ-ಪಿತರ ಗೋರಿಗಳಿಗೆ ಹಾನಿಗೊಳಿಸಿರುವುದು ತುಂಬಾ ನೋವಾಗಿದೆ. ಆದರೆ, ಈ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ಕೆಲಸವು ನಮ್ಮವರು ಮಾಡಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದುದು ಎಂದು ಅಬ್ದುರ್ರಶೀದ್ ತಿಳಿಸಿದರು.

ಸಚಿವರ ತಂದೆ, ತಾಯಿಯವರ ಮರಣಾ ನಂತರ ಅವರ ಅಂತ್ಯ ಸಂಸ್ಕಾರ ಮತ್ತು 40ನೆ ದಿನದ ವಿಧಿಯನ್ನು ನೆರವೇರಿಸಿದರಲ್ಲಿ ನಾನೇ ಮುಂಚೂಣಿಯಲ್ಲಿದ್ದೆ. ಅವರ ಖಬರ್‌ಗೆ ಹಾನಿಗೊಳಿಸಿರುವುದು ತುಂಬಾ ದುಃಖವಾಗಿದೆ. ಈ ಬಗ್ಗೆ ತನಿಖೆಯಾಗಲಿ ಎಂದು ನಾನು ಒತ್ತಾಯಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News