ಶಿಕ್ಷೆ ಪ್ರಮಾಣ ಪ್ರಕಟಗೊಂಡ ದಿನವೇ ಅಪರಾಧಿಗಳ ಬಿಡುಗಡೆ
ಪುತ್ತೂರು,ಎ.30: ಆ್ಯಸಿಡ್ ಎರಚಿದ ಪ್ರಕರಣದ ಅಪರಾಧಿಗಳಾದ ಮೋಹನ್ ಕುಮಾರ್ ಹೆಗ್ಡೆ, ಪ್ರಶಾಂತನ ಶಿಕ್ಷೆಯ ಪ್ರಮಾಣವನ್ನು ಶನಿವಾರ ಪ್ರಕಟಿಸಿದ ಪುತ್ತೂರು ಐದನೆ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ 4 ವರ್ಷ 15 ದಿನ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಪರಾಧಿಗಳು ಈಗಾಗಲೇ 4 ವರ್ಷ 15 ದಿನ ನ್ಯಾಯಾಂಗ ಬಂಧನದಲ್ಲಿದ್ದ ಕಾರಣ ನ್ಯಾಯಾಂಗ ಬಂಧನದ ಅವಧಿಯನ್ನು ಜೈಲು ಶಿಕ್ಷೆಯೆಂದು ಪರಿಗಣಿಸಿ ಆರೋಪಿಗಳನ್ನು ಶನಿವಾರವೇ ಬಿಡುಗಡೆಗೊಳಿಸಿದೆ.
2012 ಎ. 7 ರಂದು ಆರ್ಯಾಪು ಗ್ರಾಮದ ಸಂಪ್ಯದಲ್ಲಿ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪೆರಿಗೇರಿ ನಿವಾಸಿ ಸೀತಾರಾಮ ಆಚಾರ್ಯ ಹಾಗೂ ಅವರ ಮಕ್ಕಳಾದ ಅಮೃತೇಶ್ ಮತ್ತು ರಾಜ್ ಕುಮಾರ್ ಮೇಲೆ ಆರೋಪಿಗಳಾದ ತಾರಿಗುಡ್ಡೆ ನಿವಾಸಿ ಮೋಹನ್ ಕುಮಾರ್ ಹೆಗ್ಡೆ ಮತ್ತು ಕೈಪಂಗಳ ನಿವಾಸಿ ರಿಕ್ಷಾ ಚಾಲಕ ಪ್ರಶಾಂತ್ ವಿರುದ್ಧ ಆ್ಯಸಿಡ್ ಎರಚಿದ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ಬಂಧನದ ಬಳಿಕ ಜಾಮೀನು ಅರ್ಜಿ ತಿರಸ್ಕೃತಗೊಂಡು ನ್ಯಾಯಾಂಗ ಬಂಧನದಲ್ಲಿದ್ದರು. ಎ.28 ರಂದು ಇವರನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿ, ಎ.30 ರಂದು ತೀರ್ಪು ನೀಡುವುದಾಗಿ ತಿಳಿಸಿತ್ತು. ದಂಡ ಪಾವತಿ: ನ್ಯಾಯಾಲಯವು ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸುವ ಮುನ್ನ ಒಂದನೇ ಆರೋಪಿಯಾದ ಮೋಹನ್ ಕುಮಾರ್ ಹೆಗ್ಡೆಗೆ 5 ಸಾವಿರ ರೂ. ಮತ್ತು ಎರಡನೆ ಆರೋಪಿ ಪ್ರಶಾಂತ್‌ಗೆ 10 ಸಾವಿರ ರೂ. ದಂಡ ಪಾವತಿಸುವಂತೆ ಆದೇಶಿಸಿತ್ತು. ಅಪರಾಧಿಗಳು ನ್ಯಾಯಾಲಯಕ್ಕೆ ದಂಡ ಪಾವತಿಸಿ ಬಿಡುಗಡೆಗೊಂಡಿದ್ದಾರೆ.
ಈ ಪ್ರಕರಣದ ಮೂರನೆ ಆರೋಪಿ ಪ್ರೇಮಾಳನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಎ.28 ರಂದು ನ್ಯಾಯಾಲಯ ಬಿಡುಗಡೆಗೊಳಿಸಿತ್ತು.