ಉಳ್ಳಾಲ: ಆರೋಪಿ ಪೊಲೀಸರಿಗೆ ಶರಣು; ಬಿಡುಗಡೆ

Update: 2016-04-30 13:29 GMT

ಉಳ್ಳಾಲ, ಎ.30: ಉಳ್ಳಾಲ ದರ್ಗಾದ ಬಳಿಯಿದ್ದ ಸಚಿವ ಯು.ಟಿ ಖಾದರ್‌ರ ಹೆತ್ತವರ ಗೋರಿಗೆ ಹಾನಿ ಮಾಡಿದ್ದ ಆರೋಪಿಯು ಉಳ್ಳಾಲ ಪೊಲೀಸರಿಗೆ ಶರಣಾಗಿದ್ದು, ಆತ ಮಾನಸಿಕ ಅಸ್ವಸ್ಥ ಎನ್ನುವ ನೆಲೆಯಲ್ಲಿ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಗಿದೆ.

ಉಳ್ಳಾಲ ಸೈಯದ್ ಮದನಿ ದರ್ಗಾದ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ವಿಷಯದಲ್ಲಿ ಇತ್ತೀಚೆಗೆ ಎರಡು ಗುಂಪುಗಳ ನಡುವೆ ವಿವಾದ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ವಕ್ಫ್ ಮಂಡಳಿಯ ಜಿಲ್ಲಾಧಿಕಾರಿ ಉಳ್ಳಾಲಕ್ಕೆ ಆಗಮಿಸಿ ಅಧ್ಯಕ್ಷರ ಕಚೇರಿಗೆ ಮೊಹರು ಅಂಟಿಸಿದ್ದರು. ಈ ಸಂದರ್ಭ ಉಭಯ ಗುಂಪುಗಳ ಮಧ್ಯೆ ಘರ್ಷಣೆಯೂ ನಡೆದಿತ್ತು. ಈ ಸಂದರ್ಭ ಗುಂಪೊಂದು ಸಚಿವ ಯು.ಟಿ.ಖಾದರ್ ವಿರುದ್ಧ ಘೋಷಣೆಗಳನ್ನು ಕೂಗಿದ ಘಟನೆ ನಡೆದಿತ್ತು. ಎಲ್ಲಾ ಘಟನೆಗಳಿಗೂ ಸಚಿವರೇ ಕಾರಣ ಎನ್ನುವ ಆರೋಪವೂ ಕೇಳಿ ಬಂದಿತ್ತು.

ಶುಕ್ರವಾರ ನಮಾಝ್ ಬಳಿಕ ದರ್ಗಾ ಮುಂಭಾಗದಲ್ಲಿ ಹಲವಾರು ಮಂದಿ ಸೇರಿದ್ದು ಇದೇ ಸಂದರ್ಭ ವ್ಯಕ್ತಿಯೊಬ್ಬ ದರ್ಗಾದ ಮುಖ್ಯ ದ್ವಾರದಲ್ಲೇ ಇರುವ ಸಚಿವ ಯು.ಟಿ.ಖಾದರ್ ಅವರ ತಂದೆ ಮತ್ತು ತಾಯಿಯ ಗೋರಿಗೆ ಹಾನಿ ಮಾಡಿದ್ದ. ಆರೋಪಿ ಶರೀಫ್ ಶುಕ್ರವಾರ ಸಂಜೆಯೇ ಪೊಲೀಸರಿಗೆ ಶರಣಾಗಿದ್ದು, ಆತನನ್ನು ರಾತ್ರಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

 ಖಂಡನೆ:

ಮಾಜಿ ಶಾಸಕ ಹಾಗೂ ಅವರ ಪತ್ನಿಯ ಗೋರಿಗೆ ಹಾನಿ ಮಾಡಿದ ಘಟನೆಯನ್ನು ದರ್ಗಾದ 'ನೂತನ ಸಮಿತಿ' ಖಂಡಿಸಿದೆ. ಆಡಳಿತ ವಿಚಾರದಲ್ಲಿ ಸಮಸ್ಯೆ ಇದೆ ಎನ್ನುವ ಮಾತ್ರಕ್ಕೆ ಗೋರಿಗಳನ್ನು ಹಾನಿ ಮಾಡುವ ಕೃತ್ಯ ಯಾರೂ ಮಾಡುವುದಿಲ್ಲ. ಆದರೆ ಮಾಜಿ ಶಾಸಕರು ಮತ್ತು ಅವರ ಪತ್ನಿಯ ಗೋರಿಯನ್ನು ಯಾರೋ ಹಾನಿ ಮಾಡಿದ್ದು ಕೃತ್ಯವನ್ನು ಸಮಿತಿ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಉಳ್ಳಾಲ ದರ್ಗಾ ಹಾಗೂ ಕ್ಷೇತ್ರಕ್ಕೆ ಯು.ಟಿ.ಫರೀದ್ ಕೊಡುಗೆ ಅನನ್ಯ. ಅವರ ಬಗ್ಗೆ ತನಗೆ ಮಾತ್ರವಲ್ಲದೆ ಎಲ್ಲರಿಗೂ ಅಪಾರ ಗೌರವವಿದೆ. ಗೋರಿ ಹಾನಿ ಪ್ರಕರಣ ತೀವ್ರ ನೋವು ತಂದಿದ್ದು ಮುಂದೆಂದೂ ಇಂತಹ ಘಟನೆಗೆ ಯಾರೂ ಮುಂದಾಗಬಾರದು ಎಂದು ದರ್ಗಾ ಸಮಿತಿಯ ಹಾಜಿ ರಶೀದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News