ಕೊಕ್ಕಡ: ನೂತನ ಅಂಬೇಡ್ಕರ್ ಭವನ ಉದ್ಘಾಟನೆ

Update: 2016-04-30 14:10 GMT

ಬೆಳ್ತಂಗಡಿ, ಎ.30: ದಲಿತ ಸಮುದಾಯದ ಅಭಿವೃದ್ಧಿಗಾಗಿ ಸರಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಅತಿ ಹೆಚ್ಚಿನ ಅನುದಾನಗಳು ಬಂದಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಬೆಳ್ತಂಗಡಿಯಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಹಾಗೂ ಹೋಬಳಿ ಕೇಂದ್ರಗಳಾದ ವೇಣೂರು ಹಾಗೂ ಕೊಕ್ಕಡದಲ್ಲಿ ತಲಾ 50 ಲಕ್ಷ ರೂ. ವೆಚ್ಚದ ಅಂಬೇಡ್ಕರ್ ಭವನಗಳು ಮಂಜೂರಾಗಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಕುಕ್ಕೇಡಿಯಲ್ಲಿ ದ.ಕ. ಜಿಲ್ಲಾ ಪಂಚಾಯತ್, ಬೆಳ್ತಂಗಡಿ ತಾಪಂ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬೆಳ್ತಂಗಡಿ, ಹಾಗೂ ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ ಹಾಗೂ ಕುಕ್ಕೇಡಿ ಗ್ರಾಪಂನ ಸಹಯೋಗದಲ್ಲಿ ನೂತನವಾಗಿ ರಚನೆಯಾದ ಅಂಬೇಡ್ಕರ್ ಭವನದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಕುಕ್ಕೇಡಿ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಕಾಮಗಾರಿಗಳಾಗಿವೆ. ವೇಣೂರು -ನಾರಾವಿ ರಸ್ತೆಗೆ 5.5 ಕೋಟಿ ರೂ. ಅನುದಾನ ಮಂಜೂರಾಗಿದೆ. ತಾಲೂಕಿನ ಅತ್ಯಂತ ಉತ್ತಮವಾದ ಅಂಬೇಡ್ಕರ್ ಭವನ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಇಲ್ಲಿ ರಚನೆಯಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಜಿಪಂ ಸದಸ್ಯ ಶೇಖರ ಕುಕ್ಕೇಡಿ ಮಾತನಾಡಿ,ಕೆಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಅಂಬೇಡ್ಕರ್‌ರ 125 ನೆಯ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪೂರ್ಣಗೊಂಡಿರುವುದು ಅಭಿನಂದನೀಯ. ಅಂಬೇಡ್ಕರ್‌ರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಕುಕ್ಕೇಡಿ ಗ್ರಾಪಂ ಅಭಿವೃದ್ದಿಯಲ್ಲಿ ತಾಲೂಕಿಗೆ ಮಾದರಿಯಾಗುವಂತೆ ಮುಂದುವರಿಯುತ್ತಿದೆ ಎಂದರು.

ಎಪಿಎಂಸಿ ಅಧ್ಯಕ್ಷ, ಜಿಪಂ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ, ಅಂಬೇಡ್ಕರ್‌ರ ಕನಸನ್ನು ನನಸಾಗಿಸಲು ಶೋಷಿತ ಸಮುದಾಯದವರ ಅಭಿವೃದ್ಧಿಗಾಗಿ ಸರಕಾರಗಳು ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿವೆ. ಇದರ ಸದುಪಯೋಗವನ್ನು ಪಡೆದುಕೊಂಡು ಸಮುದಾಯ ಸ್ವಾಭಿಮಾನದಿಂದ ಅಭಿವೃದ್ಧಿಯತ್ತ ಸಾಗಬೇಕು ಎಂದರು.

ಪಡಂಗಡಿ ಕ್ಷೇತ್ರದ ತಾಪಂ ಸದಸ್ಯೆ ಸುಶೀಲಾ, ಜಿಪಂ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಿ.ಆರ್. ನರೇಂದ್ರ ಮಾತನಾಡಿ ಶುಭ ಹಾರೈಸಿದರು.   
ಕುಕ್ಕೇಡಿ ಗ್ರಾಪಂ ಅಧ್ಯಕ್ಷೆ ತೇಜಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಳದಂಗಡಿ ತಾಪಂ ಸದಸ್ಯೆ ವಿನುಷಾ, ನಿರ್ಮಿತಿ ಕೇಂದ್ರದ ಇಂಜಿನಿಯರ್ ನವೀನ್ ಕುಮಾರ್, ಪಿಡಿಒ ರಶ್ಮಿ ಬಿ.ಪಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಕಟ್ಟಡಕ್ಕೆ ಅನುದಾನ ಒದಗಿಸಿದ ಶಾಸಕ ವಸಂತ ಬಂಗೇರರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ಜೊತೆಗೆ ಜಿಪಂ ಸದಸ್ಯ ಶೇಖರ ಕುಕ್ಕೇಡಿ, ತಾಪಂ ಸದಸ್ಯೆ ಸುಶೀಲಾ, ಗುತ್ತಿಗೆದಾರ ರಫೀಕ್‌ರನ್ನು ಸನ್ಮಾನಿಸಲಾಯತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News