ಕೆನ್ಯ: ಭಾರೀ ಮಳೆಗೆ ಕುಸಿದ ಕಟ್ಟಡ - ಕನಿಷ್ಠ 14 ಸಾವು
Update: 2016-04-30 22:21 IST
ನೈರೋಬಿ (ಕೆನ್ಯ), ಎ. 30: ಕೆನ್ಯದ ರಾಜಧಾನಿ ನೈರೋಬಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕನಿಷ್ಠ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈ ಪೈಕಿ ಕನಿಷ್ಠ ಏಳು ಮಂದಿ ಆರು ಮಹಡಿಯ ಕಟ್ಟಡವೊಂದು ಕುಸಿದಾಗ ಅದರಡಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಶುಕ್ರವಾರ ರಾತ್ರಿ ಕಟ್ಟಡ ಕುಸಿದಿತ್ತು. ಅದಾದ 10 ಗಂಟೆಯ ಬಳಿಕ, ಇಡೀ ರಾತ್ರಿಯ ಭಯಾನಕ ಬಿರುಗಾಳಿ ತಿಳಿಗೊಂಡು ಆಕಾಶ ಸ್ವಚ್ಛಗೊಂಡ ನಂತರ ಶನಿವಾರ ಬೆಳಗ್ಗೆ ಅವಶೇಷಗಳ ಬೃಹತ್ ರಾಶಿಯಿಂದ ಓರ್ವ ವ್ಯಕ್ತಿಯನ್ನು ಜೀವಂತವಾಗಿ ಹೊರತೆಗೆಯಲಾಯಿತು ಎಂದು ಕೆನ್ಯ ರೆಡ್ ಕ್ರಾಸ್ ಹೇಳಿದೆ.
ಪೊಲೀಸ್ ಮತ್ತು ಇತರ ರಕ್ಷಣಾ ಸೇವೆಗಳ ಇಲಾಖೆಯೊಂದಿಗೆ ಕಾರ್ಯಾಚರಣೆ ನಡೆಸಿದ ಕೆನ್ಯ ರೆಡ್ ಕ್ರಾಸ್ ಅವಶೇಷಗಳ ಅಡಿಯಲ್ಲಿ ಶೋಧಿಸಿತು.