×
Ad

ಸುಳ್ಯ: ನಪಂನಿಂದ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಬಗ್ಗೆ ಚರ್ಚೆ

Update: 2016-04-30 22:36 IST

ಸುಳ್ಯ, ಎ.30: ಪಯಸ್ವಿನಿ ನದಿಯಲ್ಲಿ ನೀರಿನ ಕೊರತೆ ಉಂಟಾಗಿದ್ದು, ಸುಳ್ಯ ನಗರಕ್ಕೆ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕುರಿತು ಚರ್ಚಿಸಲು ಸಂಘ-ಸಂಸ್ಥೆಗಳ ಮುಖಂಡರ ಸಭೆಯು ನಪಂ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಪಂಚಾಯತ್‌ನ ಪೌರ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮಾತನಾಡಿ, ಇದೊಂದು ಎಚ್ಚರಿಕೆಯ ಗಂಟೆ. ಟೆಸ್ಟ್ ಡೋಸ್. ಇದನ್ನೇ ಸಹಿಸಲು ಆಗುತ್ತಿಲ್ಲ. ಭವಿಷ್ಯದಲ್ಲಿ ಸತತ ಇದನ್ನು ಎದುರಿಸಬೇಕು. ದೂರ ದೃಷ್ಟಿಯನ್ನು ಇಟ್ಟುಕೊಂಡು ನೀರನ್ನು ಇಂಗಿಸುವ ಕೆಲಸ ಮಾಡಬೇಕು. ಚೆಕ್‌ಡ್ಯಾಂ ಮಾಡುವುದರಿಂದಲೂ ಅಂತರ್ಜಲವನ್ನು ಉಳಿಸುವ ಕೆಲಸ ಮಾಡಬಹುದು. ಕಟ್ಟಡಕ್ಕೆ ಪರವಾನಿಗೆ ನೀಡುವಾಗ ನೀರನ್ನು ಇಂಗಿಸುವುದನ್ನು ಕಡ್ಡಾಯ ಮಾಡಬೇಕು ಎಂದರು.

ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್ ಮಾತನಾಡಿ, ಹೆಚ್ಚುವರಿ ಕೊಳವೆ ಬಾವಿ ಕೊರೆಸಿ ಟ್ಯಾಂಕರ್ ಮೂಲಕ ನೀರು ನೀಡುವ ವ್ಯವಸ್ಥೆ ಮಾಡಬೇಕೆಂದರು.

ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಿಪ್ರಸಾದ್ ಮಾತನಾಡಿ, ದೇವಸ್ಥಾನದ ಎರಡನೆ ಮಹಡಿಯಲ್ಲಿ ನೀರಿನ ಟ್ಯಾಂಕ್ ಇದ್ದು, ಪಂಚಾಯತ್ ನೀರು ಅಲ್ಲಿಗೆ ತಲುಪುತ್ತಿಲ್ಲ. ಕೊಳವೆ ಬಾವಿ ನೀರನ್ನು ಈಗ ಬಳಕೆ ಮಾಡುತ್ತಿದ್ದೇವೆ. ಅದೂ ಬರಿದಾಗುವ ಸೂಚನೆಯಿದೆ. ನೀರಿನ ಬಳಕೆಯನ್ನು ಕಡಿಮೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ನದಿಯಿಂದ ಮರಳು ತೆಗೆಯುವಾಗ ಅದರೊಂದಿಗೆ ನೀರೂ ಕೂಡಾ ಖಾಲಿಯಾಗುತ್ತದೆ. ಹಾಗಾಗಿ ಮರಳು ತೆಗೆಯುವುದನ್ನು ತಕ್ಷಣ ನಿರ್ಬಂಧಿಸಬೇಕು ಎಂದು ಪಂಚಾಯತ್ ಸದಸ್ಯ ನಜೀರ್ ಶಾಂತಿನಗರ ಹೇಳಿದರು. ಮರಳು ತೆಗೆದ ಹೊಂಡದಲ್ಲಿ ನೀರು ನಿಲ್ಲುವುದರಿಂದ ಮರಳು ತೆಗೆದರೆ ಒಳ್ಳೆಯದು ಎಂದು ಜನಸ್ಪಂದನ ವೇದಿಕೆಯ ಸುಂದರ್ ರಾವ್ ಹೇಳಿದರು.

ನೀರನ್ನು ವ್ಯರ್ಥ ಮಾಡದಂತೆ ಜನರಲ್ಲಿ ಜಾಗೃತಿ ಮಾಡಿಸುವ ಕರಪತ್ರ ಮಾಡಿ ಹಂಚುವುದಾಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ದೇರಪ್ಪಜ್ಜನಮನೆ ಹೇಳಿದರು.

ಪ್ರಕಾಶ್ ಹೆಗ್ಡೆ ಮಾತನಾಡಿ, ಇನ್ನೊಂದು ವಾರದವರೆಗೆ ಮಾತ್ರ ಪಯಸ್ವಿನಿ ನೀರು ಸಿಗಬಹುದು. ಹಾಗಾಗಿ ಎಲ್ಲಾ ಧರ್ಮದವರೂ ಸೇರಿ ಮಳೆಗಾಗಿ ದೇವರಿಗೆ ಮೊರೆ ಹೋಗಬೇಕು ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಬೆಳ್ಯಪ್ಪಗೌಡ, ವಿನಯ ಕುಮಾರ್ ಕಂದಡ್ಕ, ಅರುಳಪ್ಪನ್, ಪಂಚಾಯತ್ ಸದಸ್ಯರಾದ ಕೆ.ಎಂ.ಮುಸ್ತಫಾ, ಗೋಪಾಲ್ ನಡುಬೈಲು, ಗಿರೀಶ್ ಕಲ್ಲುಗದ್ದೆ, ಕಿರಣ ಕುರುಂಜಿ, ಶೀಲಾವತಿ, ಜಾನಕಿ, ಹರಿಣಾಕ್ಷಿ, ಶ್ರೀಲತಾ ಪ್ರಸನ್ನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News