×
Ad

ಸೈಫಾನ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲು ಒತ್ತಾಯಿಸಿ ಧರಣಿ

Update: 2016-04-30 22:56 IST

ಮಂಗಳೂರು, ಎ.30: ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಮೃತಪಟ್ಟಿರುವ ಸೈಫಾನ್ ಅಮಾಯಕರಾಗಿದ್ದು, ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹಿಸಿ ಸೈಫಾನ್ರ ಹಿತೈಷಿಗಳು ಇಂದು ಸಂಜೆ ಎ.ಜೆ.ಆಸ್ಪತ್ರೆಯ ಶವಾಗಾರದ ಮುಂಭಾಗದಲ್ಲಿ ಧರಣಿ ನಡೆಸಿದರು.

ನಗರದ ಯುನಿಟಿ ಆಸ್ಪತ್ರೆಯಲ್ಲಿ ಮಧ್ಯಾಹ್ನ ಮೃತಪಟ್ಟ ಸೈಫಾನ್‌ರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಗರದ ಎ.ಜೆ.ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.

ಮರಣೋತ್ತರ ಪರೀಕ್ಷೆ ನಡೆದ ಬಳಿಕ ಅಂತ್ಯಸಂಸ್ಕಾರದ ವಿಧಿಯಂತೆ ಮೃತ ದೇಹಕ್ಕೆ ಸ್ನಾನ ಮಾಡಿಸಿ, ಬಿಳಿ ಬಟ್ಟೆ ತೊಡಿಸಿ, ಆ್ಯಂಬುಲೆನ್ಸ್‌ನಲ್ಲಿ ತೊಕ್ಕೊಟ್ಟು ಪಿಲಾರಿನ ಮನೆಗೆ ಕೊಂಡೊಯ್ಯಲು ಸಿದ್ಧರಾದಾಗ ಶವಾಗಾರದ ಆವರಣದಲ್ಲಿದ್ದ ಕೆಲವರು ಇದಕ್ಕೆ ತಡೆಯೊಡ್ಡಿದರು. ಸೈಫಾನ್ ಅಮಾಯಕನಾಗಿದ್ದು, ಆತನಿಗೆ ಅನ್ಯಾಯವಾಗಿದೆ ಎಂದು ಸೈಫಾನ್ ಕುಟುಂಬಸ್ಥರು ಮನವಿ ಮಾಡುತ್ತಿದ್ದಂತೆ ಅಲ್ಲಿದ್ದ ಕೆಲವರು ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಬೇಕು. ಇಲ್ಲದಿದ್ದರೆ ಮೃತದೇಹವನ್ನು ಕೊಂಡೊಯ್ಯಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಆದರೂ ಪೊಲೀಸರು ಅವರನ್ನು ತೆರವುಗೊಳಿಸಿ ಮೃತದೇಹವನ್ನು ಆ್ಯಂಬುಲೆನ್ಸ್‌ನಲ್ಲಿ ಇಡುತ್ತಿದ್ದಂತೆ ಆ್ಯಂಬುಲೆನ್ಸ್ ಮುಂದೆ ಧರಣಿ ನಡೆಸಿದರು. ಕೊನೆಗೂ ಪೊಲೀಸರು ಮಧ್ಯಪ್ರವೇಶಿಸಿ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಪಿಲಾರುವಿನ ಮನೆಗೆ ಸಾಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News