ನದಿಗೆ ತ್ಯಾಜ್ಯ ಸುರಿಯುವುದನ್ನು ತಡೆದ ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟಗಾರ ಅಬ್ದುರ್ರಹ್ಮಾನ್ ಯುನಿಕ್
ಉಪ್ಪಿನಂಗಡಿ, ಎ.30: ನದಿಗೆ ತ್ಯಾಜ್ಯ ಸುರಿಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವ ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟಗಾರ ಅಬ್ದುರ್ರಹ್ಮಾನ್ ಯುನಿಕ್ ಶನಿವಾರ ಇಲ್ಲಿನ 34ನೆ ನೆಕ್ಕಿಲಾಡಿಯಲ್ಲಿ ಕುಮಾರಧಾರ ಹಳೆ ಸೇತುವೆಯ ಬಳಿ ನದಿಗೆ ಖಾಸಗಿ ಸಭಾಂಗಣವೊಂದರ ತ್ಯಾಜ್ಯವನ್ನು ಸುರಿಯಲು ಮುಂದಾದಾಗ ಅದಕ್ಕೆ ತಡೆಯೊಡ್ಡಿ, ಪಂಚಾಯತ್‌ಗೆ ದೂರು ನೀಡಿದ ಘಟನೆ ನಡೆದಿದೆ.
ನೆಕ್ಕಿಲಾಡಿಯಲ್ಲಿರುವ ಶ್ರೀ ರಾಘವೇಂದ್ರ ಮಠದ ಹಿಂಬದಿಯಲ್ಲಿರುವ ಹರೀಶ್ ಉಪಾಧ್ಯಾಯ ಎಂಬವರಿಗೆ ಸೇರಿದ ಖಾಸಗಿ ಸಭಾಂಗಣವೊಂದರ ತ್ಯಾಜ್ಯವನ್ನು ಇಲ್ಲಿನ ಕುಮಾರಧಾರ ನದಿಯ ಹಳೆ ಸೇತುವೆಯ ಬಳಿ ಸುರಿಯಲು ಕಾರ್ಮಿಕರಿಬ್ಬರು ಕೈಗಾಡಿಯೊಂದರಲ್ಲಿ ಹೇರಿಕೊಂಡು ಬಂದಿದ್ದರು. ಅವರು ನದಿಗೆ ಕಸ ಸುರಿಯಲು ಸಿದ್ಧತೆ ನಡೆಸುತ್ತಿದ್ದಂತೆ ಅದನ್ನು ಗಮನಿಸಿದ ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟಗಾರ ಅಬ್ದುರ್ರಹ್ಮಾನ್ ಯುನಿಕ್ ಅಲ್ಲಿಗಾಗಮಿಸಿ, ಇದಕ್ಕೆ ವಿರೋಧ ವ್ಯಕ್ತಪಡಿಸಿದಲ್ಲದೆ, ತಕ್ಷಣವೇ ನೆಕ್ಕಿಲಾಡಿ ಪಂಚಾಯತ್‌ಗೆ ತೆರಳಿ ಕಾರ್ಯದರ್ಶಿಯನ್ನು ಸ್ಥಳಕ್ಕೆ ಕರೆದುಕೊಂಡು ಬಂದರು.
ಸ್ಥಳಕ್ಕಾಗಮಿಸಿದ 34ನೆ ನೆಕ್ಕಿಲಾಡಿ ಗ್ರಾಪಂ ಕಾರ್ಯದರ್ಶಿ ರಾಮಣ್ಣ ಎಸ್., ಕಸ ಸಮೇತ ಹಾರೆ, ಕೈಗಾಡಿಯನ್ನು ವಶಪಡಿಸಿಕೊಂಡರಲ್ಲದೆ, ಸಭಾಂಗಣದ ಮಾಲಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
34ನೆ ನೆಕ್ಕಿಲಾಡಿ ಪಂಚಾಯತ್‌ನ ತ್ಯಾಜ್ಯ ಘಟಕ ಶಾಂತಿನಗರದಲ್ಲಿದ್ದು, ಪಂಚಾಯತ್‌ನ ಸನಿಹದಲ್ಲೇ ಇರುವ ಸಂತೆ ಮೈದಾನದ ಹಿಂಬದಿ ತ್ಯಾಜ್ಯ ಶೇಖರಣಾ ಕೇಂದ್ರವೊಂದನ್ನು ಸ್ಥಾಪಿಸಿದೆ. ಜನರು, ಹೊಟೇಲ್, ಅಂಗಡಿಗಳವರು ಇಲ್ಲಿಗೆ ತಂದು ಸುರಿದ ಕಸವನ್ನು ಪಂಚಾಯತ್ ಶಾಂತಿನಗರದ ತ್ಯಾಜ್ಯ ಘಟಕಕ್ಕೆ ವಿಲೇವಾರಿ ಮಾಡುತ್ತದೆ.
ಇತರೆಡೆಯಲ್ಲಿ ವಿಧಿಸುವಂತೆ ತ್ಯಾಜ್ಯ ವಿಲೇವಾರಿಗೆ ಪಂಚಾಯತ್ ಯಾವುದೇ ಶುಲ್ಕ ವಿಧಿಸುವುದಿಲ್ಲ. ತ್ಯಾಜ್ಯ ನಿರ್ವಹಣೆ ನಡೆಯುವುದು ಇಲ್ಲಿ ಉಚಿತವಾಗಿಯೇ. ತ್ಯಾಜ್ಯ ಕೇಂದ್ರ ಸನಿಹದಲ್ಲಿದ್ದರೂ, ಕೆಲವರು ಮಾತ್ರ ಕಸ ಹಾಕಲು ಕುಮಾರಧಾರ ನದಿ ದಡವನ್ನೇ ಬಳಸುತ್ತಿದ್ದಾರೆ. ಇವರ ಈ ದುರ್ಬುದ್ಧಿಯಿಂದಾಗಿ ಸೇತುವೆಯ ಕೆಳಗಡೆಯ ಕುಮಾರಧಾರ ನದಿಯ ದಡದಲ್ಲಿ ತ್ಯಾಜ್ಯ ರಾಶಿಯೇ ಕಂಡು ಬರುವಂತಾಗಿದೆ.
ಶಿಸ್ತು ಕ್ರಮ: ಪಿಡಿಒ
ನದಿಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದು, ನದಿ ದಡದಲ್ಲಿ ಹಾಗೂ ನದಿ ನೀರಿಗೆ ತ್ಯಾಜ್ಯ ಸುರಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ತ್ಯಾಜ್ಯ ಸುರಿಯಲು 34ನೆ ನೆಕ್ಕಿಲಾಡಿ ಸಂತೆ ಮೈದಾನದ ಬಳಿ ತ್ಯಾಜ್ಯ ಶೇಖರಣಾ ಕೇಂದ್ರ ನಿರ್ಮಿಸಿದ್ದು, ಎಲ್ಲರೂ ತ್ಯಾಜ್ಯವನ್ನು ಇಲ್ಲಿಗೆ ತಂದು ಸುರಿಯಬೇಕು. ಕುಮಾರಧಾರ ನದಿಗೆ ಸುರಿಯಲು ತಂದ ತ್ಯಾಜ್ಯದೊಂದಿಗೆ ಕೈಗಾಡಿ ಹಾಗೂ ಹಾರೆ ವಶಪಡಿಸಿಕೊಳ್ಳಲಾಗಿದೆ. ಈ ತ್ಯಾಜ್ಯ ಪೆಟ್ರೋಲ್ ಪಂಪ್ ಬಳಿಯ ನಿವಾಸಿ ಹರೀಶ್ ಉಪಾಧ್ಯಾಯ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿದ್ದು, ಅವರ ಮೇಲೆ ಪಂಚಾಯತ್ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ ಎಂದು 34ನೆ ನೆಕ್ಕಿಲಾಡಿ ಗ್ರಾಪಂನ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ ಎಂ. ತಿಳಿಸಿದ್ದಾರೆ.