ಬೆಳ್ತಂಗಡಿಯಲ್ಲಿ ಬೃಹತ್ ರಕ್ತದಾನ ಶಿಬಿರ

Update: 2016-04-30 17:57 GMT

ಬೆಳ್ತಂಗಡಿ, ಎ.30: ರಕ್ತದಾನವು ರೋಗಿಯ ಜೀವ ಉಳಿಸಲು ಸಹಾಯಕವಾಗುತ್ತದೆ. ಶಿಬಿರದಲ್ಲಿ ಸಂಗ್ರಹವಾದ ರಕ್ತವನ್ನು ಬ್ಲಡ್ ಬ್ಯಾಂಕ್‌ಗಳು ಸುರಕ್ಷಿತವಾಗಿ ಸಂಗ್ರಹಿಸಿ ಅರ್ಹರಿಗೆ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು ಎಂದು ಮಾಜಿ ಶಾಸಕ ಕೆ.ಪ್ರಬಾಕರ ಬಂಗೇರ ಹೇಳಿದರು.

  ಶನಿವಾರ ಲಾಲ ಪಡ್ಲಾಡಿ ಶಾಲಾ ವಠಾರದಲ್ಲಿ ಉತ್ಸಾಹಿ ಯುವಕ ಮಂಡಲ ಲಾಲ ಮತ್ತು ವರುಣ್ ಟ್ರಾವೆಲ್ಸ್ ಬೆಳ್ತಂಗಡಿ, ಗ್ರಾಪಂ ಲಾಲ, ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಯಾಂಪ್ರೊ ಬ್ಲಡ್ ಬ್ಯಾಂಕ್ ಪುತ್ತೂರು, ವೆನ್‌ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಪುತ್ತೂರು ಹಾಗೂ ಸ್ಥಳಿಯ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ಸಾಹಿ ಯುವಕ ಮಂಡಲ ಹಲವಾರು ವರ್ಷಗಳಿಂದ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಾನುರಾಗಿಯಾಗಿದೆ. ಊರಿನಲ್ಲಿರುವ ಸಂಘಸಂಸ್ಥೆಗಳು, ಗ್ರಾಪಂ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆಯನ್ನು ಸಾಕಾರಗೊಳಿಸುವತ್ತ ಗಮನಹರಿಸಬೇಕು. ಈ ಯೋಜನೆ ಕೇವಲ ಒಂದು ದಿನ, ವಾರಕ್ಕೆ ಮಾತ್ರ ಸೀಮಿತವಾಗದೆ ನಿರಂತರತೆಯನ್ನು ಕಾಪಾಡಿಕೊಂಡು ಬರಬೇಕು ಎಂದು ಸಲಹೆ ನೀಡಿದರು.
   
ಲಾಲ ಗ್ರಾಪಂ ಅಧ್ಯಕ್ಷೆ ವೀಣಾ ರಾವ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್‌ನ ಅಧ್ಯಕ್ಷ ಮೇ. ಜ.ಎಂ. ವಿ. ಭಟ್, ಜಿಪಂ ಸದಸ್ಯೆ ಸೌಮ್ಯಲತಾ ಜಯಂತ ಗೌಡ, ಎಸ್‌ಕೆಡಿಆರ್‌ಡಿಪಿ ಮೇಲ್ವಿಚಾರಕ ಸುರೇಶ್ ಶುಭಹಾರೈಸಿದರು. ವೇದಿಕೆಯಲ್ಲಿ ಪುತ್ತೂರು ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ. ರಾಮಚಂದ್ರ ಭಟ್, ಲಾಲ ಗ್ರಾಪಂ ಸದಸ್ಯರಾದ ಅಮಿತಾ, ಆಶಾ ಸಲ್ದಾನಾ, ಪಡ್ಲಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಿರಂಜನ ಜೈನ್, ಉತ್ಸಾಹಿ ಯುವಕ ಮಂಡಲ ಅಧ್ಯಕ್ಷ ಹರೀಶ್ ಎಲ್., ಉತ್ಸಾಹಿ ಯುವಕ ಮಂಡಲ ಗೌರವಾಧ್ಯಕ್ಷ ವಿಲ್ಸನ್ ಸೋನ್ಸ್, ಕಾರ್ಯಾಧ್ಯಕ್ಷ ವಿಜಯ ಫೆರ್ನಾಂಡಿಸ್, ಕಾರ್ಯದರ್ಶಿ ದಿನಕರ ಗೌಡ, ಕೋಶಾಧಿಕಾರಿ ಶ್ರೀಧರ್ ಆರ್., ಸಂಚಾಲಕ ರಾಜೇಶ್ ಶೆಟ್ಟಿ, ಸಹ ಸಂಚಾಲಕ ಶಶಿಧರ ಪೈ ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News