ಚುಟುಕು ಸುದ್ದಿಗಳು

Update: 2016-04-30 18:17 GMT

ಎಂ.ಎಲ್. ಸಾಮಗ, ಸಿದ್ದಕಟ್ಟೆಗೆ ಯಕ್ಷಗಾನ ಪ್ರಶಸ್ತಿ
ಉಡುಪಿ, ಎ.30: ಉಡುಪಿಯ ಯಕ್ಷಗಾನ ಕಲಾರಂಗದ ಯಕ್ಷಗಾನ ವಿದ್ವಾಂಸ ಹಾಗೂ ಅರ್ಥದಾರಿಗೆ ನೀಡುವ ಈ ಬಾರಿಯ ‘ಪೆರ್ಲ ಕೃಷ್ಣ ಭಟ್ ಪ್ರಶಸ್ತಿ’ ಉಡುಪಿಯ ಹವ್ಯಾಸಿ ಕಲಾವಿದ ಹಾಗೂ ವಿದ್ವಾಂಸ ಪ್ರೊ. ಎಂ.ಎಲ್. ಸಾಮಗ ಹಾಗೂ ‘ಮಟ್ಟಿ ಮುರಳೀಧರ ರಾವ್’ ಪ್ರಶಸ್ತಿಗೆ ಉಭಯ ತಿಟ್ಟುಗಳ ಹಿರಿಯ ಅರ್ಥದಾರಿ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಮೇ 23ರಿಂದ 29ರವರೆಗೆ ರಾಜಾಂಗಣದಲ್ಲಿ ನಡೆಯಲಿರುವ ತಾಳಮದ್ದಲೆ ಸಪ್ತಾಹದ ಸಮಾರೋಪದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ ರಾವ್ ತಿಳಿಸಿದ್ದಾರೆ.

ಕಾಸರಗೋಡು: ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರ್ಕೃತ
ಕಾಸರಗೋಡು, ಎ.30: ಕೇರಳ ವಿಧಾನಸಭೆಗೆ ಮೇ 16ರಂದು ನಡೆಯಲಿರುವ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಶನಿವಾರ ನಡೆದಿದ್ದು, ಒಂದು ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಕಾಸರಗೋಡು ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಕೆ. ಮನೋಹರರವರ ನಾಮಪತ್ರವನ್ನು ತಿರಸ್ಕರಿಸಲಾಯಿತು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮನೋಹರ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡದ ಕಾರಣ ಮುಂದೆ ಸ್ಪರ್ಧಿಸದಂತೆ ಅಸಿಂಧುಗೊಳಿಸಿತ್ತು. ಇದರಿಂದ ಈ ಬಾರೀ ಸಲ್ಲಿಸಿದ್ದ ನಾಮಪತ್ರ ತಿರಸ್ಕ್ರತಗೊಂಡಿತು. ಉಳಿದ ಎಲ್ಲ ನಾಮಪತ್ರಗಳು ಸಮರ್ಪಕವಾಗಿರುವುದರಿಂದ ಡಮ್ಮಿ ಅಭ್ಯರ್ಥಿಗಳ ನಾಮಪತ್ರಗಳನ್ನು ಕೈಬಿಡಲಾಯಿತು. ನಾಮಪತ್ರ ಹಿಂದೆಗೆಯಲು ಸೋಮವಾರ ಕೊನೆ ದಿನವಾಗಿದ್ದು ಅಂದು ಸಂಜೆ ಕಣದಲ್ಲಿರುವವರ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಇಂದು ಕಾರ್ಮಿಕರ ಮೆರವಣಿಗೆ
ಉಡುಪಿ, ಎ.30: ಮೇ ದಿನಾಚರಣೆಯ ಪ್ರಯುಕ್ತ ಮೇ 1ರಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಆಶ್ರಯದಲ್ಲಿ ಉಡುಪಿಯಲ್ಲಿ ಕಾರ್ಮಿಕರ ಮೆರವಣಿಗೆಯನ್ನು ಆಯೋಜಿಸಲಾಗಿದೆ.
ಸಂಜೆ 4ಗಂಟೆಗೆ ಉಡುಪಿ ಜೋಡುಕಟ್ಟೆ ಬಳಿಯಿಂದ ಹೊರಟು ಕವಿ ಮುದ್ದಣ್ಣ ಮಾರ್ಗವಾಗಿ ಬಸ್‌ನಿಲ್ದಾಣ ಸಮೀಪದ ಮಹಾತ್ಮಾಗಾಂಧಿ ಪ್ರತಿಮೆಯ ಮುಂದೆ ಸಾರ್ವಜನಿಕ ಸಭೆಯೊಂದಿಗೆ ಕಾರ್ಯಕ್ರಮ ಸಮಾಪನಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 ಕಾಸರಗೋಡು ಜಿಲ್ಲೆಯಲ್ಲಿ 9,90, 513 ಮತದಾರರು
  ಕಾಸರಗೋಡು, ಎ.30: ವಿಧಾನ ಸಭೆಗೆ ಮೇ 16ರಂದು ನಡೆಯುವಚುನಾವಣೆಯಲ್ಲಿ ಜಿಲ್ಲೆಯ 9,90,513 ಮಂದಿ ತಮ್ಮ ಹಕ್ಕು ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಎ.29ರಂದು ಪ್ರಕಟಿಸಿದ ಪಟ್ಟಿಯಂತೆ ಜಿಲ್ಲೆಯಲ್ಲಿ 4,80,733 ಪುರುಷರು ಮತ್ತು 5,09780 ಮಹಿಳಾ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 799 ಮತಗಟ್ಟೆಗಳಿವೆ. ಆ ಪೈಕಿ ಮಂಜೇಶ್ವರ ಕ್ಷೇತ್ರದ 167 ಮತಗಟ್ಟೆಯಲ್ಲಿ 1,03,404 ಪುರುಷರು ಮತ್ತು 1,04,741 ಮಹಿಳೆಯರು ಸೇರಿದಂತೆ 2,08,145 ಮತದಾರರಿದ್ದಾರೆ.
   ಕಾಸರಗೋಡು ಕ್ಷೇತ್ರದ 146 ಮತಗಟ್ಟೆಗಳಲ್ಲಿ 94,214 ಪುರುಷರು ಮತ್ತು 94,634 ಮಹಿಳೆಯರು ಸೇರಿದಂತೆ 1,88, 848 ಮತದಾರರಿದ್ದಾರೆ. ಉದುಮ ಕ್ಷೇತ್ರದ 161 ಮತಗಟ್ಟೆ ಗಳಲ್ಲಿ 97,117 ಪುರುಷರು ಮತ್ತು 1,02,712 ಮಹಿಳೆಯರು ಸೇರಿದಂತೆ 1,99,828 ಮತದಾರರಿದ್ದಾರೆ.
 ಕಾಞಂಗಾಡ್ ಕ್ಷೇತ್ರದ 159 ಮತಗಟ್ಟೆಗಳಲ್ಲಿ 97,205 ಪುರುಷರು ಮತ್ತು 1,07,240 ಮಹಿಳೆಯರು ಸಹಿತ 2,04, 445 ಮತದಾರರಿದ್ದಾರೆ. ತ್ರಿಕ್ಕರಿಪುರ ಕ್ಷೇತ್ರದ 166 ಮತಗಟ್ಟೆಗಳಲ್ಲಿ 88,793 ಪುರುಷರು ಮತ್ತು 1,00, 453 ಮಹಿಳೆಯರ ಸಹಿತ 1,89,246 ಮತದಾರರಿದ್ದಾರೆ.
 ಇದಲ್ಲದೆ 1,150 ಅನಿವಾಸಿ ಮತದಾರರೂ ಇದ್ದಾರೆ. ಹೊಸದಾಗಿ 23,165 ಮತದಾರರು ಸೇರ್ಪಡೆಗೊಂಡಿದ್ದಾರೆ.

‘ಬರ ಇಲ್ಲ’ ಎಂದ ಸಚಿವ ಪಾಟೀಲ್ ರಾಜೀನಾಮೆ ನೀಡಲಿ: ಪೂಜಾರಿ
ಮಂಗಳೂರು, ಎ.30: ರಾಜ್ಯದಲ್ಲಿ ಬರ ಇಲ್ಲ ಎಂದು ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಸೃಷ್ಟಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಆಗ್ರಹಿಸಿದರು.
 ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಚ್.ಕೆ.ಪಾಟೀಲ್‌ರ ಹೇಳಿಕೆ ನಾಚಿಕೆಗೇಡಿನದು. ಮುಖ್ಯಮಂತ್ರಿಯವರು ಬರಪೀಡಿತ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದಾರೆ. ಆದರೆ ಎಚ್.ಕೆ .ಪಾಟೀಲ್ ಬರಪೀಡಿತ ಜಿಲ್ಲೆಗಳಿಗೆ ಹೋಗುತ್ತಿಲ್ಲ. ರಾಜ್ಯದಲ್ಲಿ ಬರ ಇಲ್ಲ ಅಂದರೆ ಕೇಂದ್ರದಿಂದ ಬರ ಪರಿಹಾರ ಪಡೆಯಲು ಸಾಧ್ಯವಿಲ್ಲ. ಎಚ್.ಕೆ.ಪಾಟೀಲ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗುರ ಉಂಟಾಗಿದ್ದು, ಮುಖ್ಯಮಂತ್ರಿಯವರು ಅವರ ಹೇಳಿಕೆಯನ್ನು ಸಮರ್ಥಿಸುವುದು ಸರಿಯಲ್ಲ. ಮುಖ್ಯಮಂತ್ರಿಯಾಗಲು ಹೊರಟಿರುವ ಎಚ್.ಕೆ.ಪಾಟೀಲ್ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಹೇಳಿದರು.
    ಪಕ್ಷದ ಆಂತರಿಕ ವಿಷಯ ಬಹಿರಂಗ ಚರ್ಚೆ ಮಾಡಬಾರದೆಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನೀಡಿರುವ ಸೂಚನೆ ಬಗ್ಗೆ ಪ್ರತಿಕ್ರಿಯಿಸಿದ ಅವರು ತಾನು ಪಕ್ಷದ ಸಂವಿಧಾನವನ್ನು ಕರಗತ ಮಾಡಿಕೊಂಡಿದ್ದು, ಪಕ್ಷದ ಸಂವಿಧಾನಕ್ಕೆ ಪೂರಕವಾಗಿ ಮಾತನಾಡುತ್ತಿದ್ದೇನೆ. ಪಕ್ಷದ ಕಾರ್ಯಕ್ರಮಗಳನ್ನು ಟೀಕಿಸಿದರೆ ಪಕ್ಷ ವಿರೋಧಿಯಾಗುತ್ತದೆ. ಭ್ರಷ್ಟಾಚಾರವನ್ನು ವಿರೋಧಿಸುವುದು ಪಕ್ಷದ ಸಂವಿಧಾನದ ಪ್ರಕಾರ ಸರಿಯಾಗಿದ್ದು ಅದರಂತೆ ತಾನು ಮಾತನಾಡಿದ್ದೇನೆ. ಪಕ್ಷದ ಅಧ್ಯಕ್ಷರು ಪಕ್ಷದ ಸಂವಿಧಾನವನ್ನು ಅಧ್ಯಯನ ಮಾಡಲಿ ಎಂದು ಹೇಳಿದರು.
 ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ್‌ರ ಅವಧಿ ಮುಗಿದಿದ್ದು, ಅವರು ಮುಂದಿನ ಅವಧಿಗೆ ಅಧ್ಯಕ್ಷರಾಗುವುದಿಲ್ಲ ಎಂದು ಹೇಳಿದ್ದಾರೆ. ತಾನು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲ. ಮುನಿಯಪ್ಪನವರು ಅಧ್ಯಕ್ಷ ಸ್ಥಾನ ಬಯಸುವುದು ತಪ್ಪಲ್ಲ. 7 ಬಾರಿ ಸಂಸದರಾಗಿರುವ ಮುನಿಯಪ್ಪನವರು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಮರ್ಥರಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕಳ್ಳಿಗೆ ತಾರನಾಥ ಶೆಟ್ಟಿ, ಉಮೇಶ್ಚಂದ್ರ, ಟಿ.ಕೆ.ಸುಧೀರ್, ಅರುಣ್ ಕುವೆಲ್ಲೋ, ಪುರಂದರದಾಸ್ ಕೂಳೂರು, ರಮಾನಂದ ಪೂಜಾರಿ, ಕರುಣಾಕರ್ ಶೆಟ್ಟಿ, ನೀರಜ್ ಪಾಲ್, ಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News