×
Ad

ಕಿಂಗ್‌ಫಿಷರ್ ಬ್ರಾಂಡ್‌ಗಳನ್ನು ಕೇಳುವವರೇ ಇಲ್ಲ!

Update: 2016-04-30 23:50 IST

ಮುಂಬೈ,ಎ.30: ಮದ್ಯದ ದೊರೆ ವಿಜಯ ಮಲ್ಯ ಅವರಿಗೆ ಸಾವಿರಾರು ಕೋ.ರೂ.ಸಾಲ ನೀಡಿ ಕೈ ಸುಟ್ಟುಕೊಂಡಿರುವ ಬ್ಯಾಂಕುಗಳ ಕೂಟವು ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಬ್ರಾಂಡ್‌ಗಳು ಮತ್ತು ಟ್ರೇಡ್ ಮಾರ್ಕ್‌ಗಳನ್ನು ಶನಿವಾರ ಹರಾಜಿಗಿಟ್ಟಿತ್ತಾದರೂ ಒಬ್ಬನೇ ಒಬ್ಬ ಬಿಡ್‌ದಾರ ಈ ಆಸ್ತಿಗಳ ಖರೀದಿಗೆ ಮುಂದೆ ಬಂದಿಲ್ಲ. ಇವುಗಳಿಗೆ 366.70 ಕೋ.ರೂ.ಗಳ ಮೀಸಲು ಬೆಲೆಯನ್ನು ನಿಗದಿಗೊಳಿಸಲಾಗಿತ್ತು.

ಇದು ಮಲ್ಯರಿಂದ ಸ್ವಲ್ಪ ಹಣವನ್ನಾದರೂ ವಸೂಲು ಮಾಡುವ ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಎರಡನೇ ವಿಫಲ ಯತ್ನವಾಗಿದೆ.

ಈ ಹಿಂದೆ ಕಿಂಗ್‌ಫಿಷರ್ ಹೌಸ್‌ನ್ನು ಹರಾಜಿಗಿಟ್ಟಾಗಲೂ ಒಬ್ಬನೇ ಒಬ್ಬ ಬಿಡ್‌ದಾರ ಅದನ್ನು ಖರೀದಿಸಲು ಮುಂದೆ ಬಂದಿರಲಿಲ್ಲ.

ಕಿಂಗ್‌ಫಿಷರ್ ಲಾಂಛನ,ಒಂದು ಕಾಲದಲ್ಲಿ ಪ್ರಸಿದ್ಧವಾಗಿದ್ದ ಟ್ಯಾಗ್‌ಲೈನ್ ‘ಫ್ಲೈ ದಿ ಗುಡ್ ಟೈಮ್ಸ್’ ಇತ್ಯಾದಿಗಳು ಇಂದು ಹರಾಜಿಗಿಟ್ಟಿದ್ದ ಆಸ್ತಿಗಳಲ್ಲಿ ಸೇರಿದ್ದವು.

ಅಂದ ಹಾಗೆ ಟ್ರೇಡ್‌ಮಾರ್ಕ್‌ಗಳಿಗೆ ನಿಗದಿಗೊಳಿಸಲಾಗಿದ್ದ 366.70 ಕೋ.ರೂ.ಗಳ ಮೀಸಲು ಬೆಲೆಯು ಸಾಲದ ಸಹಭದ್ರತೆಗಾಗಿ ಅದನ್ನು ಅಡವಿರಿಸಲಾಗಿರುವ ಮೊತ್ತದ ಹತ್ತನೇ ಒಂದು ಪಾಲು ಕೂಡ ಆಗಿರಲಿಲ್ಲ.

ಮೀಸಲು ಬೆಲೆ ತುಂಬಾ ಹೆಚ್ಚೆಂದು ಹಲವರು ಭಾವಿಸಿದ್ದು, ಇದು ಹರಾಜು ವಿಫಲಗೊಳ್ಳಲು ಸಂಭಾವ್ಯ ಕಾರಣವಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿದವು.

ಬೆಳಿಗ್ಗೆ 11:30ಕ್ಕೆ ಆರಂಭಗೊಂಡಿದ್ದ ಆನ್‌ಲೈನ್ ಹರಾಜು ಬಿಡ್‌ದಾರರಿಗಾಗಿ ಒಂದು ಗಂಟೆ ಕಾಲ ವ್ಯರ್ಥವಾಗಿ ಕಾದ ಬಳಿಕ ಕೊನೆಗೊಂಡಿತು.
 

ಕಿಂಗ್‌ಫಿಷರ್ ಏರ್‌ಲೈನ್ಸ್ ಉತ್ತುಂಗದಲ್ಲಿದ್ದಾಗ ಕಿಂಗ್‌ಫಿಷರ್ ಬ್ರಾಂಡ್‌ಗೆ ಗ್ರಾಂಟ್ ಥಾರ್ನಟನ್ 4000 ಕೋ.ರೂ.ಗೂ ಅಧಿಕ ಬೆಲೆ ಕಟ್ಟಿತ್ತು. ಹಾಲಿ ವಿಮಾನಯಾನ ಸಂಸ್ಥೆಗಳು ಈ ಹರಾಜಿನಲ್ಲಿ ಆಸಕ್ತಿ ವ್ಯಕ್ತಪಡಿಸಬೇಕಾಗಿತ್ತು. ಆದರೆ ಯಾವುದೇ ಸಂಸ್ಥೆ ಮುಂದೆ ಬಂದಿಲ್ಲ. ಈ ಬ್ರಾಂಡ್‌ನ್ನು ಖರೀದಿಸಿ ಅದನ್ನು ಪುನಃಶ್ಚೇತನಗೊಳಿಸುವ ಬದಲು ಹೊಸ ವಿಮಾನಯಾನ ಸಂಸ್ಥೆಯನ್ನು ಆರಂಭಿಸುವುದು ಒಳ್ಳೆಯದು ಎಂದು ಹಿರಿಯ ಬ್ಯಾಂಕರ್ ಓರ್ವರು ಹೇಳಿದರು. ಬ್ಯಾಂಕುಗಳು ಈಗ ಕಿಂಗ್‌ಫಿಷರ್ ಹೌಸ್ ಮತ್ತು ಬ್ರಾಂಡ್‌ಗಳ ಮೀಸಲು ಬೆಲೆಯನ್ನು ತಗ್ಗಿಸಿ ಮತ್ತೆ ಹರಾಜಿಗೆ ಪ್ರಯತ್ನಿಸಬಹುದು ಎಂದು ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News