ಉತ್ತರಾಖಂಡ ಕಾಡ್ಗಿಚ್ಚು: ಕೇಂದ್ರದಿಂದ ಎನ್‌ಡಿಆರ್‌ಎಫ್‌ನ 3 ಕಂಪೆನಿಗಳ ರವಾನೆ
ಡೆಹ್ರಾಡೂನ್, ಎ.30: ಉತ್ತರಾಖಂಡದಲ್ಲಿ ಕಾಡ್ಗಿಚ್ಚು ತೀವ್ರಗೊಂಡಿದ್ದು, ಬೆಂಕಿ ನಿಯಂತ್ರಣ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಕೇಂದ್ರ ಸರಕಾರವು ರಾಷ್ಟ್ರೀಯ ವಿಕೋಪ ಪ್ರತಿಕ್ರಿಯಾ ಪಡೆಯ (ಎನ್‌ಡಿಆರ್‌ಎಫ್) ಮೂರು ಕಂಪೆನಿಗಳನ್ನು ಅಲ್ಲಿಗೆ ಕಳುಹಿಸಿದೆ. ಪರ್ವತ ರಾಜ್ಯದಲ್ಲಿ ಒಟ್ಟಾರೆಯಾಗಿ 135 ಸಿಬ್ಬಂದಿಯನ್ನು ಕಾರ್ಯಾಚರಣೆಗಿಳಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.
ಬಿಕ್ಕಟ್ಟನ್ನು ನಿಭಾಯಿಸಲು ಎನ್‌ಡಿಆರ್‌ಎಫ್‌ನ ಸಹಾಯಕ್ಕಾಗಿ ರಾಜ್ಯಪಾಲ ಕೆ.ಕೆ.ಪೌಲ್ ಕೇಂದ್ರಕ್ಕೆ ಮನವಿ ಮಾಡಿದ್ದರು. ಅವರು ಗುರುವಾರ ಬೆಂಕಿ ನಿಯಂತ್ರಿಸಲು ನಿಯೋಜಿಸಿದ್ದ ರಾಜ್ಯದ ಸಿಬ್ಬಂದಿಯ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿ 6 ಸಾವಿರಕ್ಕೇರಿಸಿದರು.
ಪೌಲ್‌ರ ನೇತೃತ್ವದಲ್ಲಿ ನಡೆದಿದ್ದ ರಾಜ್ಯದ ಉನ್ನತಾಧಿಕಾರಿಗಳ ಸಭೆಯೊಂದು ಬೆಂಕಿ ನಿಯಂತ್ರಣಕ್ಕೆ ನೀರಿನ ಟ್ಯಾಂಕರ್‌ಗಳನ್ನು ಒದಗಿಸಲು ನಿರ್ಧರಿಸಿತ್ತು.
ಫೆಬ್ರವರಿಯಿಂದೀಚೆಗೆ ರಾಜ್ಯದಲ್ಲಿ 922 ಕಾಡ್ಗ್ಗಿಚ್ಚು ಪ್ರಕರಣಗಳು ವರದಿಯಾಗಿವೆ. ಪ್ರತ್ಯೇಕ ಘಟನೆಗಳಲ್ಲಿ ಮೂವರು ಹೆಂಗಸರು ಹಾಗೂ ಒಂದು ಮಗು ಸೇರಿ ಒಟ್ಟು ಐವರು ಬಲಿಯಾಗಿದ್ದಾರೆ ಹಾಗೂ 7 ಮಂದಿ ಗಾಯಗೊಂಡಿದ್ದಾರೆಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಎಫ್) ಬಿ.ಪಿ.ಗುಪ್ತಾ ತಿಳಿಸಿದ್ದಾರೆ.
ದಹನಶೀಲ ಚೀಡ್ ಹಾಗೂ ಸಾಲು ವೃಕ್ಷಗಳು ದಟ್ಟವಾಗಿರುವುದರಿಂದ ಪಾವುರಿ, ತೆಹ್ರಿ ಹಾಗೂ ನೈನಿತಾಲ್‌ಗಳು ತೀವ್ರವಾಗಿ ಬಾಧಿತವಾಗಿವೆ.