‘ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು’
ಮಣಿಪಾಲ, ಎ.30: ಪ್ರಕೃತಿ, ಮಾನವ ಮತ್ತು ಇತರೆ ಜೀವರಾಶಿಗಳಿಗೆ ನೀಡಿರುವ ನೀರಿನ ಸಂರಕ್ಷಣೆ, ಮರುಪೂರಣ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಎಂಐಟಿಯ ಹಿರಿಯ ಪ್ರಾಧ್ಯಾಪಕ, ಭೂವಿಜ್ಞಾನಿ ಡಾ. ಎಚ್.ಎನ್. ಉದಯಶಂಕರ್ ಹೇಳಿದ್ದಾರೆ.
ಮಣಿಪಾಲದ ಎಂಐಟಿಯಲ್ಲಿ ಮೈಸೂರಿನ ರಾಜ್ಯ ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಮಳೆನೀರು ಕೊಯ್ಲು ಮತ್ತು ಜಲ ಮರುಪೂರಣ ವಿಷಯದ ಕುರಿತು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಇಂಜಿನಿಯರ್‌ಗಳು, ಸಮುದಾಯ ಸಂಘಟಕರು, ಸಮುದಾಯ ಸಂಘಟನಾಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರುಗಳಿಗೆ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು. ಭೂಮಿಯ ಅಂರ್ತಜಲವನ್ನು ವೃದ್ಧಿಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಪ್ರಕೃತಿಯಲ್ಲಿರುವ ನೀರನ್ನು ಆವಶ್ಯಕತೆಗನುಗುಣವಾಗಿ ಮಾತ್ರ ಬಳಸುವಂತೆ ಹಾಗೂ ಮಳೆ ನೀರನ್ನು ಸೂಕ್ತ ರೀತಿಯಲ್ಲಿ ಮರು ಪೂರಣ ಮಾಡಿ ಬಳಸುವ ಕುರಿತು ಡಾ.ಉದಯಶಂಕರ್ ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಮನೆ ನಿರ್ಮಾಣ ಸಂದರ್ಭ ಲೈಸೆನ್ಸ್ ನೀಡುವಾಗ ಕಡ್ಡಾಯವಾಗಿ ಮಳೆ ನೀರಿನ ಮರುಪೂರಣ ವ್ಯವಸ್ಥೆ ಮಾಡುವ ನಿಯಮದ ಬಗ್ಗೆ ಹಲವೆಡೆ ಗೊಂದಲವಿದೆ. ಆದರೆ ತಮಿಳುನಾಡಿನಲ್ಲಿ ಈಗಾಗಲೇ ಈ ನಿಯಮ ಪಾಲನೆಗೆ ಕಡ್ಡಾಯ ಶರತ್ತು ವಿಧಿಸುತ್ತಿದ್ದು, ಇದೇ ರೀತಿ ಎಲ್ಲೆಡೆ ಆದರೆ ನೀರಿನ ಸಮರ್ಪಕ ಬಳಕೆ ಸಾಧ್ಯವಿದೆ. ಕೊಳವೆ ಬಾವಿ ಮತ್ತು ತೆರೆದ ಬಾವಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಹೊರ ತೆಗೆಯದಂತೆ ಸೂಚಿಸಿದ ಅವರು, ತೆರೆದ ಬಾವಿಗಳನ್ನು ಹೆಚ್ಚು ಆಳವಾಗಿ ತೆಗೆಯುವ ಬದಲು ಅಗಲವಾಗಿ ತೆಗೆಯುವಂತೆ ಹಾಗೂ ನದಿಗಳಲ್ಲಿ ಅಂರ್ತಜಲ ಸಂರಕ್ಷಣೆ ಮಾಡುವಂತೆ ಕರೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪ್ರಸನ್ನ, ಎಲ್ಲ್ಲ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಬೈಲಾದಲ್ಲಿ ತಿದ್ದುಪಡಿ ಮಾಡಿಕೊಂಡು ಮನೆ ಕಟ್ಟಡ ನಿರ್ಮಾಣ ಲೈಸೆನ್ಸ್ ನೀಡುವ ಸಂದರ್ದಲ್ಲಿ ಮಳೆ ನೀರು ಕೊಯ್ಲು, ಜಲ ಮರುಪೂರಣ ಮಾಡುವ ಕುರಿತು ಶರತ್ತು ವಿಧಿಸಲು ಸಾಧ್ಯವಿದೆ ಎಂದು ಹೇಳಿದರು.
ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ., ಪ್ರಾಧ್ಯಾಪಕ ನಾರಾಯಣ ಶೆಣ್ಯೆ, ಸಂಪನ್ಮೂಲ ವ್ಯಕ್ತಿ ಡಾ.ವಾರಣಾಶಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಎಂಐಟಿ ಸಿವಿಲ್ ವಿಭಾಗ ಮುಖ್ಯಸ್ಥ ಎಂ.ಡಿ.ಚಡಗ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ ಬೋಧಕ ಹೆಚ್. ರಮೇಶ್ ಸ್ವಾಗತಿಸಿ, ವಂದಿಸಿದರು. ಪ್ರಾಧ್ಯಾಪಕ ಬಾಲಕೃಷ್ಣ ಮದ್ದೋಡಿ ನಿರೂಪಿಸಿದರು.