×
Ad

ಕ್ಯಾಲಿಫೋರ್ನಿಯದಲ್ಲಿ 2ನೆ ದಿನವೂ ಟ್ರಂಪ್ ವಿರುದ್ಧ ಪ್ರತಿಭಟನೆ

Update: 2016-05-01 00:27 IST

ಬರ್ಲಿನ್‌ಗೇಮ್ (ಕ್ಯಾಲಿಫೋರ್ನಿಯ), ಎ. 30: ಕ್ಯಾಲಿಫೋರ್ನಿಯದಲ್ಲಿ ಸತತ ಎರಡನೆ ದಿನವಾದ ಶುಕ್ರವಾರವೂ ರಿಪಬ್ಲಿಕನ್ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತಿಭಟನೆ ನಡೆಯಿತು.
ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಕಾರರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬಿಲಿಯಾಧೀಶ ಉದ್ಯಮಿ ತನ್ನ ವಾಹನಗಳ ಸಾಲನ್ನು ನಿಲ್ಲಿಸಿ ಹಿಂಬದಿಯ ದ್ವಾರದ ಮೂಲಕ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡಬೇಕಿದ್ದ ಹೊಟೇಲ್‌ನ್ನು ಪ್ರವೇಶಿಸಿದರು. ಕ್ಯಾಲಿಫೋರ್ನಿಯ ರಿಪಬ್ಲಿಕನ್ ಸಮಾವೇಶ ನಡೆಯಬೇಕಿದ್ದ ಹೊಟೇಲ್‌ನ ಎದುರುಗಡೆ ಪ್ರತಿಭಟನಕಾರರು ಘೋಷಣೆಗಳನ್ನು ಕೂಗುತ್ತಿದ್ದರು.
‘‘ಇಂದು ನಾನು ಇಲ್ಲಿಗೆ ಬರಲು ಪ್ರಯಾಸಪಟ್ಟೆ’’ ಎಂದು ಟ್ರಂಪ್ ಬರ್ಲಿನ್‌ಗೇಮ್‌ನಲ್ಲಿ ನೆರೆದ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದರು. ‘‘ವಾಸ್ತವವಾಗಿ ನಾನು ಗಡಿ ದಾಟಿ ಬರುತ್ತಿದ್ದೇನೇನೋ ಎಂದುಕೊಂಡೆ’’ ಎಂದರು.

 ಪ್ರತಿಭಟನಕಾರರ ಪೈಕಿ ಕೆಲವರು ಮೆಕ್ಸಿಕೊ ಧ್ವಜಗಳನ್ನು ಹಿಡಿದುಕೊಂಡಿದ್ದರು. ಒಂದು ಹಂತದಲ್ಲಿ ಹೊಟೇಲ್‌ನ ಭದ್ರತಾ ದ್ವಾರದ ಬಳಿಗೆ ಧಾವಿಸಿ ಬಂದರು. ಆಗ ಪೊಲೀಸರು ಅವರನ್ನು ಹಿಂದಕ್ಕೆ ತಳ್ಳಿದರು.
ಇದಕ್ಕಿಂತ ಒಂದು ದಿನದ ಹಿಂದೆ ಕ್ಯಾಲಿಫೋರ್ನಿಯದ ಕೋಸ್ಟ ಮೆಸ ಎಂಬ ಪಟ್ಟಣದಲ್ಲೂ ಟ್ರಂಪ್ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. 20 ಮಂದಿಯನ್ನು ಬಂಧಿಸಲಾಗಿತ್ತು.

 ಹಿಲರಿಯನ್ನು ಸುಲಭವಾಗಿ ಸೋಲಿಸುವೆ: ಟ್ರಂಪ್
ವಾಶಿಂಗ್ಟನ್, ಎ. 30: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್‌ರನ್ನು ತಾನು ಅತ್ಯಂತ ಸುಲಭವಾಗಿ ಸೋಲಿಸುವೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ರಿಪಬ್ಲಿಕನ್ ಪಕ್ಷದಿಂದ ನಾಮ ನಿರ್ದೇಶನಗೊಳ್ಳಲು ಅವರಿಗೆ ಇನ್ನೂ ಸುಮಾರು 250 ನಿಯೋಗಿ (ಡೆಲಿಗೇಟ್ಸ್)ಗಳ ಅಗತ್ಯವಿದೆ.
 ‘‘ನಾನು ಪ್ರತಿ ವಾರವೂ ಅವರನ್ನು ಸೋಲಿಸುತ್ತಿದ್ದೇನೆ’’ ಎಂದು ತನ್ನ ರಿಪಬ್ಲಿಕನ್ ಪಕ್ಷದ ಎದುರಾಳಿಗಳನ್ನು ಉಲ್ಲೇಖಿಸುತ್ತಾ ಕ್ಯಾಲಿಫೋರ್ನಿಯದಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ಹೇಳಿದರು.
ಆರಂಭದಲ್ಲಿ 17ರಷ್ಟಿದ್ದ ರಿಪಬ್ಲಿಕನ್ ಆಕಾಂಕ್ಷಿಗಳ ಸಂಖ್ಯೆ ಈಗ 3ಕ್ಕೆ ಇಳಿದಿದೆ.
‘‘ನಾವು ಈವರೆಗೆ ಯಾರನ್ನೆಲ್ಲ ಸೋಲಿಸಿದ್ದೇವೋ ಅವರಿಗಿಂತಲೂ ಸುಲಭವಾಗಿ ಹಿಲರಿ ಸೋಲುತ್ತಾರೆ.’’ ಎಂದು 69 ವರ್ಷದ ಟ್ರಂಪ್ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News